ಎಲ್ ಫಶರ್ ನಲ್ಲಿ ನೆರವು ವಿತರಣೆಗಾಗಿ ವಿಶ್ವ ಸಂಸ್ಥೆಯಿಂದ ಒಂದು ವಾರ ಕದನ ವಿರಾಮ ಪ್ರಸ್ತಾವ: ಸುಡಾನ್ ಸೇನೆ ಸಮ್ಮತಿ

PC : arabnews.com
ಕೈರೊ: ಎಲ್ ಫಶರ್ ಗೆ ಮಾನವೀಯ ನೆರವು ವಿತರಿಸಲು ಒಂದು ವಾರ ಕಾಲ ಕದನ ವಿರಾಮ ಘೋಷಿಸಬೇಕು ಎಂಬ ವಿಶ್ವ ಸಂಸ್ಥೆಯ ಪ್ರಸ್ತಾವಕ್ಕೆ ಸುಡಾನ್ ಸೇನೆ ಸಮ್ಮತಿ ಸೂಚಿಸಿದೆ ಎಂದು ಶುಕ್ರವಾರ ಸುಡಾನ್ ಸೇನೆ ಹೇಳಿದೆ.
ಉತ್ತರ ಡಾರ್ಫೂರ್ ಪ್ರಾಂತ್ಯದ ಎಲ್ ಫಶರ್ ನಲ್ಲಿ ಮಾನವೀಯ ನೆರವು ವಿತರಿಸಲು ಒಂದು ವಾರ ಕಾಲ ಕದನ ವಿರಾಮ ಘೋಷಿಸಬೇಕು ಎಂದು ಸುಡಾನ್ ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್-ಫತ್ತಾ ಬುರ್ಹಾನ್ ಅವರಿಗೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರೆಸ್ ದೂರವಾಣಿ ಕರೆ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ, ಈ ಕದನ ವಿರಾಮಕ್ಕೆ ಸುಡಾನ್ ಸೇನೆ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.
ವಿಶ್ವ ಸಂಸ್ಥೆಯ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ಬುರ್ಹಾನ್, ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಜಾರಿಗೊಳಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಎಂದು ಹೇಳಲಾಗಿದೆ. ಆದರೆ, ಅರೆ ಸೇನಾಪಡೆಯಾದ ರ್ಯಾಪಿಡ್
ಸಪೋರ್ಟ್ ಫೋರ್ಸಸ್ ಈ ಕದನ ವಿರಾಮ ಪ್ರಸ್ತಾವವನ್ನು ಒಪ್ಪಿಕೊಂಡು, ಅದನ್ನು ಪಾಲಿಸಲಿದೆಯೆ ಎಂಬುದಿನ್ನೂ ದೃಢಪಟ್ಟಿಲ್ಲ.
ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಟೆರೆಸ್, “ಈ ಉದ್ದೇಶದೊಂದಿಗೆ ನಾವು ಎರಡೂ ಬದಿಯವರೊಂದಿಗೆ ಮಾತುಕತೆ ನಡೆಸುತ್ತಿದ್ದು, ಫೋನ್ ಕರೆ ಮಾಡಲು ಇದೇ ಮೂಲ ಕಾರಣವಾಗಿದೆ. ಎಲ್ ಅಶರ್ ನಲ್ಲಿ ನಾವು ನಾಟಕೀಯ ಪರಿಸ್ಥಿತಿ ನೋಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಆದರೆ, ಕದನ ವಿರಾಮ ಎಂದಿನಿಂದ ಜಾರಿಗೆ ಬರಲಿದೆ ಎಂಬುದೂ ಸೇರಿದಂತೆ, ಕದನ ವಿರಾಮ ಸ್ವರೂಪದ ಕುರಿತು ಇದುವರೆಗೆ ಇನ್ನಾವುದೇ ವಿವರಗಳು ಬಹಿರಂಗಗೊಂಡಿಲ್ಲ.







