ಸುಡಾನ್: ಅರೆ ಸೇನಾಪಡೆ ದಾಳಿಯಲ್ಲಿ 50 ಮಂದಿ ಮೃತ್ಯು

PHOTO / AFP
ಖಾರ್ಟೌಮ್, ಜು.27: ಸುಡಾನ್ ನ ಪಶ್ಚಿಮದ ಕೊರ್ಡೊಫಾನ್ ಪ್ರಾಂತದ ಗ್ರಾಮವೊಂದರ ಮೇಲೆ ಅರೆ ಸೇನಾಪಡೆ `ರ್ಯಾಪಿಡ್ ಸಪೋರ್ಟ್ ಫೋರ್ಸಸ್(ಆರ್ಎಸ್ಎಫ್) ನಡೆಸಿದ ದಾಳಿಯಲ್ಲಿ ಕನಿಷ್ಠ 30 ನಾಗರಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕೊರ್ಡೊಫಾನ್ ಪ್ರಾಂತದ ಬ್ರಿಮಾ ರಶೀದ್ ಗ್ರಾಮದ ಮೇಲೆ ಸತತ ಎರಡು ದಿನ ಅರೆ ಸೇನಾಪಡೆ ಆಕ್ರಮಣ ನಡೆಸಿದೆ. ಮೊದಲ ದಿನದ ದಾಳಿಯಲ್ಲಿ ಮೂವರು ಹಾಗೂ ಎರಡನೇ ದಿನ ಮಹಿಳೆಯರು, ಮಕ್ಕಳ ಸಹಿತ ಕನಿಷ್ಠ 27 ಮಂದಿ ಹತರಾಗಿದ್ದಾರೆ ಎಂದು ಯುದ್ಧದ ಸಂದರ್ಭದ ಹಿಂಸಾಚಾರವನ್ನು ದಾಖಲಿಸುತ್ತಿರುವ ಎನ್ಜಿಒ `ದಿ ಎಮರ್ಜೆನ್ಸಿ ಲಾಯರ್ಸ್'ನ ಮೂಲಗಳು ಹೇಳಿವೆ.
ಸುಡಾನ್ ನಲ್ಲಿ ಸಶಸ್ತ್ರ ಪಡೆ ಹಾಗೂ ಅರೆ ಸೇನಾಪಡೆಯ ನಡುವಿನ ಸಂಘರ್ಷ ಮೂರನೇ ವರ್ಷಕ್ಕೆ ಮುಂದುವರಿದಿದ್ದು ಅರೆ ಸೇನಾಪಡೆ ರಾಜಧಾನಿ ಖಾರ್ಟೌಮ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಬಳಿಕ ಕೊರ್ಡೊಫಾನ್ ಪ್ರಾಂತವನ್ನು ವಶಪಡಿಸಿಕೊಳ್ಳಲು ಕೆಲ ವಾರಗಳಿಂದ ತೀವ್ರ ದಾಳಿ ನಡೆಸುತ್ತಿದೆ. ಪಶ್ಚಿಮ ಕೊರ್ಡೊಫಾನ್ ರಾಜ್ಯದಲ್ಲಿ ಅರೆ ಸೇನಾಪಡೆಯ ನಿಯಂತ್ರಣದಲ್ಲಿರುವ ಎನ್ ನಹುದ್ ಗ್ರಾಮದ ಬಳಿ ಸಶಸ್ತ್ರ ನಾಗರಿಕರು ಮತ್ತು ಅರೆ ಸೇನಾಪಡೆಯ ನಡುವೆ ಹೋರಾಟ ನಡೆಯುತ್ತಿದ್ದು ಹಲವಾರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಈ ಪ್ರದೇಶದ ಪ್ರಮುಖ ವೈದ್ಯಕೀಯ ವ್ಯವಸ್ಥೆಗೆ ನುಗ್ಗುತ್ತಿರುವ ಅರೆ ಸೇನಾಪಡೆಯ ಯೋಧರು ಗಾಯಗೊಂಡ ಯೋಧರು ಚಿಕಿತ್ಸೆ ಪಡೆಯಲು ರೋಗಿಗಳನ್ನು ಅಲ್ಲಿಂದ ಹೊರಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಘರ್ಷಣೆಯ ಬಳಿಕ ಸುಡಾನ್ ನಿಂದ ಪರಾರಿಯಾಗಿದ್ದ 1.3 ದಶಲಕ್ಷಕ್ಕೂ ಹೆಚ್ಚಿನ ಜನರು ಈಗ ಸ್ವದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.







