ಸುಡಾನ್ ಹಿಂಸಾಚಾರ ಯುದ್ದಾಪರಾಧ ಆಗಿರಬಹುದು: ಅಂತರಾಷ್ಟ್ರೀಯ ನ್ಯಾಯಾಲಯ ಎಚ್ಚರಿಕೆ

PC : aljazeera.com
ದಿ ಹೇಗ್, ನ.3: ಸುಡಾನ್ ನಗರ ಅಲ್-ಫಶರ್ ನಲ್ಲಿ ನಡೆದ ದೌರ್ಜನ್ಯಗಳು ಯುದ್ದ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿರಬಹುದು ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಸೋಮವಾರ ಎಚ್ಚರಿಕೆ ನೀಡಿದೆ.
18 ತಿಂಗಳ ಮುತ್ತಿಗೆ, ನಿರಂತರ ಬಾಂಬ್ ದಾಳಿ ಮತ್ತು ಮೂಲಸೌಕರ್ಯ ಪೂರೈಕೆಯನ್ನು ತಡೆಗಟ್ಟಿದ ಬಳಿಕ ಅಲ್-ಫಶರ್ ನಗರವನ್ನು ಅರೆ ಸೇನಾಪಡೆ ಅಕ್ಟೋಬರ್ 26ರಂದು ವಶಕ್ಕೆ ಪಡೆಯುವ ಮೂಲಕ ಸುಡಾನ್ ನ ಪಶ್ಚಿಮ ದಾರ್ಫುರ್ ವಲಯದಲ್ಲಿ ಸೇನಾಪಡೆಯ ಅಂತಿಮ ಭದ್ರಕೋಟೆಯ ಮೇಲೆ ನಿಯಂತ್ರಣ ಸಾಧಿಸಿದೆ.
`ಅಲ್-ಫಶರ್ ನಲ್ಲಿ ಸಾಮೂಹಿಕ ಹತ್ಯೆ, ಅತ್ಯಾಚಾರಗಳು ಹಾಗೂ ಇತರ ಅಪರಾಧ ನಡೆದಿರುವ ವರದಿಗಳು ಅತ್ಯಂತ ಕಳವಳಕಾರಿಯಾಗಿದೆ. ಈ ದೌರ್ಜನ್ಯಗಳು ಸಂಪೂರ್ಣ ದಾರ್ಫುರ್ ವಲಯವನ್ನು 2023ರ ಎಪ್ರಿಲ್ನಿಂದ ಕಂಗೆಡಿಸಿರುವ ಹಿಂಸಾಚಾರದ ವಿಶಾಲ ಮಾದರಿಯಾಗಿದೆ. ಇಂತಹ ಕೃತ್ಯಗಳು, ರುಜುವಾತು ಪಡಿಸಿದರೆ, ಯುದ್ದಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಬಹುದು ಎಂದು ಐಸಿಸಿಯ ಮುಖ್ಯ ತನಿಖಾಧಿಕಾರಿಯ ಕಚೇರಿಯ ಹೇಳಿಕೆ ಎಚ್ಚರಿಕೆ ನೀಡಿದೆ. ಅಲ್-ಫಶರ್ ನಗರ ಅರೆ ಸೇನಾಪಡೆಯ ಮುತ್ತಿಗೆಗೆ ಒಳಗಾಗುವ ಮುನ್ನ ಅಲ್ಲಿ ಸುಮಾರು 2,60,000 ಜನರು ವಾಸಿಸುತ್ತಿದ್ದರು. ಇವರಲ್ಲಿ 65,000ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದು ಉಳಿದವರು ಅಸಹಾಯ ಸ್ಥಿತಿಯಲ್ಲಿದ್ದಾರೆ. ವಿಚಾರಣೆಯಿಲ್ಲದೆ ಹತ್ಯೆ, ಅಪಹರಣ, ಲೈಂಗಿಕ ಹಿಂಸಾಚಾರ, ಲೂಟಿ, ದೌರ್ಜನ್ಯ, ನೆರವು ಪೂರೈಸುವ ಕಾರ್ಯಕರ್ತರ ಮೇಲೆ ದಾಳಿಯ ಘಟನೆಗಳು ಹೆಚ್ಚಿರುವುದಾಗಿ ವರದಿಯಾಗಿದೆ.
►ಸಾವಿರಾರು ಜನರ ಪಲಾಯನ: ವಿಶ್ವಸಂಸ್ಥೆ
ಸುಡಾನ್ ಸಂಘರ್ಷವು ದಾರ್ಫುರ್ ನಿಂದ ಪೂರ್ವಕ್ಕೆ ಹರಡುತ್ತಿದ್ದಂತೆ ಸಾವಿರಾರು ಜನರು ಪೂರ್ವ ದಾರ್ಫುರ್ ನಿಂದ ಪಲಾಯನ ಮಾಡುತ್ತಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
ಅಕ್ಟೋಬರ್ 26ರಿಂದ 31ರವರೆಗಿನ ಅವಧಿಯಲ್ಲಿ ಪೂರ್ವ ದಾರ್ಫುರ್ ನ ಕೊರ್ಡೊಫಾನ್ ಪ್ರಾಂತದ ಐದು ಗ್ರಾಮಗಳಿಂದ ಸುಮಾರು 36,825 ಮಂದಿ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆಯ ಹೇಳಿಕೆ ತಿಳಿಸಿದೆ.







