ಗಾಝಾದಲ್ಲಿ ಸಕ್ಕರೆ ದರ 5,000 ರೂ., ಖಾದ್ಯ ತೈಲದ ಬೆಲೆ 4,000 ರೂ.!
ಗಾಝಾ ನಿವಾಸಿಗಳಿಂದ ಇಸ್ರೇಲ್ ದೂಷಣೆ; ಹಮಾಸ್ ಕಾರಣ ಎಂದು ಇಸ್ರೇಲ್ ಪ್ರತಿ ಆರೋಪ

ಹೊಸದಿಲ್ಲಿ: ಗಾಝಾ ಪಟ್ಟಿಯಲ್ಲಿ ನಡೆದ ಈದ್ ಅಲ್-ಅಝ್ಹಾ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ನಡೆಸಲಿಲ್ಲ; ಬದಲಿಗೆ, ಮನೆಗಳು, ಶಾಲೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಾಗಿ ಬಳಕೆಯಾಗುತ್ತಿದ್ದ ಅವಶೇಷಗಳ ಮೇಲೆ ನಡೆಯಿತು. ಕದನ ವಿರಾಮವು ದೃಷ್ಟಿಗೂ ಗೋಚರಿಸಲಿಲ್ಲ; ಊಟದಲ್ಲೂ ಕಂಡು ಬರಲಿಲ್ಲ. ಈ ರಜಾದಿನದಂದು ಕಂಡು ಬರುವ ಬಲಿದಾನದ ಊಟ, ಸಾಮುದಾಯಿಕ ಔತಣ ಕೂಟಗಳು ಹಾಗೂ ಮಕ್ಕಳಿಗೆ ಉಡುಗೊರೆಯಂತಹ ಸಂಪ್ರದಾಯಗಳನ್ನು ಈಗ ಕಾಣಲೂ ಸಾಧ್ಯವಿಲ್ಲ. ಆದರೆ, ಒಂದೇ ಒಂದು ವಸ್ತು ಬಳಕೆಯ ಮೇಲೆ ಪ್ರಾಬಲ್ಯ ಸಾಧಿಸಿದೆ: ಆಹಾರ ಅಥವಾ ಅದರ ಕೊರತೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದರಲ್ಲಿ ಕಂಡು ಬಂದಿದ್ದ ಪಾರ್ಲೆ-ಜಿ ಬಿಸ್ಕತ್ ಅನ್ನು 24 ಯೂರೊಗಳಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿತ್ತು. ಈ ಬೆಲೆಯ ಅಂದಾಜು ರೂಪಾಯಿ ಮೌಲ್ಯ 2,400 ರೂ. ಆಗಿದೆ. ಬಿಸ್ಕತ್ ನಂತೆಯೇ ಗಾಝಾದಲ್ಲಿನ ಬಹುತೇಕ ಸರಕುಗಳು ಬಹುತೇಕ ಯಾರ ಕೈಗೂ ಎಟುಕದಂತಾಗಿವೆ.
ಗಾಝಾದಲ್ಲೀಗ ಒಂದು ಲೀಟರ್ ಖಾದ್ಯ ತೈಲದ ಬೆಲೆ 170 ಶೆಕೆಲ್, (ಅಂದಾಜು 4,177 ರೂ.), ಒಂದು ಕೆಜಿ ಸಕ್ಕರೆ ಬೆಲೆ 200 ಶೆಕೆಲ್ (ಅಂದಾಜು 4,914 ರೂ.), ಒಂದು ಕೆಜಿ ಹಾಲು ಪುಡಿಯ ಬೆಲೆ 35 ಶೆಕೆಲ್ (ಅಂದಾಜು 860 ರೂ.), ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 60 ಶೆಕೆಲ್ (ಅಂದಾಜು 1,474 ರೂ.), ಒಂದು ಕೆಜಿ ಉಪ್ಪಿನ ಬೆಲೆ 20 ಶೆಕೆಲ್ (ಅಂದಾಜು 491 ರೂ.), ಒಂದು ಕೆಜಿ ಬಾತು ಕೋಳಿ ಮಾಂಸದ ಬೆಲೆ 20 ಶೆಕೆಲ್ (ಅಂದಾಜು 737 ರೂ.), ಒಂದು ಕೆಜಿ ಬೆಂಡೇಕಾಯಿಯ ಬೆಲೆ 45 ಶೆಕೆಲ್ (ಅಂದಾಜು 1,106 ರೂ.), ಒಂದು ಕೆಜಿ ಈರುಳ್ಳಿ ಬೆಲೆ 180 ಶೆಕೆಲ್ (ಅಂದಾಜು 4,423 ರೂ.), ಒಂದು ಕೆಜಿ ಆಲೂಗಡ್ಡೆ ಬೆಲೆ 80 ಶೆಕೆಲ್ (ಅಂದಾಜು 1,966 ರೂ.), ಒಂದು ಕೆಜಿ ಬದನೆಕಾಯಿ ಬೆಲೆ 35 ಶೆಕೆಲ್ (ಅಂದಾಜು 860 ರೂ.), ಒಂದು ಕೆಜಿ ನಿಂಬೆ ಹಣ್ಣಿನ ಬೆಲೆ 60 ಶೆಕೆಲ್ (ಅಂದಾಜು 1,474 ರೂ.), ಒಂದು ಕೆಜಿ ಮಸೂರ ಬೀಜದ ಬೆಲೆ 35 ಶೆಕೆಲ್ (ಅಂದಾಜು 860 ರೂ.), ಒಂದು ಕಪ್ ಕಾಫಿ ಬೆಲೆ 180 ಶೆಕೆಲ್ (ಅಂದಾಜು 4,423 ರೂ.), ಒಂದು ಪೆಟ್ಟಿಗೆ ಮೇಕೆ ಮಾಂಸದ ಬೆಲೆ 200 ಶೆಕೆಲ್ (ಅಂದಾಜು 4,914 ರೂ.)ನಷ್ಟು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗಾಝಾ ಪಟ್ಟಿಯಲ್ಲಿನ ದರ ಪಟ್ಟಿಯಿಂದ ಬಯಲಾಗಿದೆ ಎಂದು NDTV ವರದಿ ಮಾಡಿದೆ.
ಆದರೆ, ಈ ಬೃಹತ್ ಪ್ರಮಾಣದ ಬೆಲೆ ಏರಿಕೆಗೆ ಹಮಾಸ್ ಅಂತಾರಾಷ್ಟ್ರೀಯ ನೆರವುಗಳನ್ನು ಅಪಹರಿಸುತ್ತಿರುವುದು ಕಾರಣ ಎಂದು ಇಸ್ರೇಲ್ ಆರೋಪಿಸಿದೆ. ಆದರೆ, ಈ ಭಾರಿ ಪ್ರಮಾಣದ ಬೆಲೆ ಏರಿಕೆಗೆ ಇಸ್ರೇಲ್ ಕಾರಣ ಎಂದು ಗಾಝಾ ನಿವಾಸಿಗಳು ಪ್ರತಿ ಆರೋಪ ಮಾಡುತ್ತಿದ್ದಾರೆ.







