ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಕೆಲವು ಸೇನಾ ನೆಲೆಗಳನ್ನು ಇಸ್ರೇಲ್ ಗೆ ಸ್ಥಳಾಂತರಿಸಲು ಸಲಹೆ

Photo Credit : AP , PTI
ಜೆರುಸಲೇಂ, ಮಾ.30: ಈಗ ನಡೆಯುತ್ತಿರುವ ಯುದ್ಧ ಕೊನೆಗೊಂಡ ಬಳಿಕ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಕೆಲವು ಸೇನಾ ನೆಲೆಗಳನ್ನು ತನ್ನ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಅಮೆರಿಕದ ಮುಂದಿಡಲು ಇಸ್ರೇಲ್ ಸಿದ್ಧತೆ ನಡೆಸುತ್ತಿರುವುದಾಗಿ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಚಾನೆಲ್ 12 ವರದಿ ಮಾಡಿದೆ.
ಪ್ರಸ್ತಾವನೆಯು ಈ ಪ್ರದೇಶದಲ್ಲಿ ಅಮೆರಿಕನ್ ಪಡೆಗಳ ನಿಯೋಜನೆಯ ಬಗ್ಗೆ ಮರುಚಿಂತನೆ ಮಾಡುವ ವಿಶಾಲ ಯೋಜನೆಯ ಭಾಗವಾಗಿದೆ. ಈಗಿನ ಪರಿಸ್ಥಿತಿಯು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ನಿಯೋಜನೆಯ ನಕ್ಷೆಯನ್ನು ಮರುರೂಪಿಸಲು ಅವಕಾಶವನ್ನು ನೀಡುತ್ತದೆ ಎಂದು ಇಸ್ರೇಲ್ ನ ಭದ್ರತಾ ಸಂಸ್ಥೆ ನಂಬಿದೆ.
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ಪಡೆಗಳಿಗೆ ಭದ್ರತಾ ಸವಾಲು ಹೆಚ್ಚಿರುವ ಸಮಯದಲ್ಲಿ ಇಸ್ರೇಲ್ ಈ ಪ್ರಸ್ತಾವನೆ ಮುಂದಿರಿಸಿದೆ. ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವಾಗಿ ಇಸ್ರೇಲ್ ತನ್ನ ಮೌಲ್ಯವನ್ನು ಈಗಾಗಲೇ ತೋರಿಸಿದ್ದು, ಸ್ಥಿರತೆ, ಬಲವಾದ ಕಾರ್ಯಾಚರಣೆ ಹಾಗೂ ಗುಪ್ತಚರ ಬೆಂಬಲವನ್ನು ಒದಗಿಸಿದೆ.
ಇಸ್ರೇಲ್ನಲ್ಲಿ ಅಮೆರಿಕದ ಸೇನಾನೆಲೆ ಇರುವುದು ಎರಡೂ ದೇಶಗಳಿಗೆ ಕಾರ್ಯತಂತ್ರದ ಪ್ರಯೋಜನವನ್ನು ಒದಗಿಸುತ್ತದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಇದೀಗ ನಡೆಯುತ್ತಿರುವ ಯುದ್ಧದಲ್ಲಿ ಇರಾನ್ ನ ನಿರಂತರ ದಾಳಿಗೆ ಗುರಿಯಾಗಿರುವ ಯುಎಇ, ಖತರ್ ಮತ್ತು ಬಹ್ರೇನ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಸ್ಥಳಾಂತರಿಸುವ ಅಪೂರ್ವ ಅವಕಾಶ ಒದಗಿರುವುದಾಗಿ ಇಸ್ರೇಲ್ನ ಅಧಿಕಾರಿಗಳು ಹೇಳಿದ್ದಾರೆ. ಇದರ ಜೊತೆಗೆ ಇಸ್ರೇಲ್ನಲ್ಲಿ ಹೊಸ ನೆಲೆಗಳನ್ನು ಸ್ಥಾಪಿಸುವ ಅಂಶವೂ ಯೋಜನೆಯಲ್ಲಿ ಸೇರಿದೆ.
ಇವುಗಳು ಲಾಜಿಸ್ಟಿಕ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಎಫ್-35 ಹಾಗೂ ಎಫ್-16 ಯುದ್ಧವಿಮಾನಗಳನ್ನು ನಿರ್ವಹಿಸುವಲ್ಲಿ ನಿಕಟ ಸಮನ್ವಯತೆ ಇರುತ್ತದೆ. ಪ್ರಸ್ತಾವನೆಯ ಭಾಗವಾಗಿ ಇಸ್ರೇಲ್ ತನ್ನ ಸುಧಾರಿತ ‘ಥಾಡ್’, ಪ್ಯಾಟ್ರಿಯಾಟ್ ಹಾಗೂ ಲೇಸರ್ ಪ್ರತಿಬಂಧಕಗಳನ್ನು ಒಳಗೊಂಡ ವಾಯುರಕ್ಷಣಾ ವ್ಯವಸ್ಥೆಗಳನ್ನು ಮತ್ತು ಗುಪ್ತಚರ ಹಂಚಿಕೆ ಸಾಮರ್ಥ್ಯಗಳನ್ನು ಅಮೆರಿಕಕ್ಕೆ ಒದಗಿಸಲಿದೆ ಎಂದು ವರದಿ ತಿಳಿಸಿದೆ.







