ಪಾಕಿಸ್ತಾನದಲ್ಲಿ ಶಾಂತಿಯುತ ರ್ಯಾಲಿಯ ವೇಳೆ ಆತ್ಮಹತ್ಯಾ ದಾಳಿ: ಐವರು ಪೊಲೀಸ್ ಅಧಿಕಾರಿಗಳು ಸೇರಿ 14 ಮೃತ್ಯು

Image Credit: ndtv
ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ರವಿವಾರ ನಡೆದ ಶಾಂತಿಯುತ ರ್ಯಾಲಿ ವೇಳೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.
ಸ್ವಾತ್ ಕಣಿವೆಯ ಕಬಲ್ ಪಟ್ಟಣದಲ್ಲಿ ಈ ದಾಳಿ ನಡೆದಿದೆ. ಪೊಲೀಸ್ ಠಾಣೆಯ ಸಮೀಪ ಪ್ರತಿಭಟನಾಕಾರರು ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹಿಸುತ್ತಿದ್ದ ವೇಳೆ ದಾಳಿಕೋರನು ಆತ್ಮಹತ್ಯಾ ಸ್ಫೋಟ ನಡೆಸಿದ್ದಾನೆ ಎಂದು ಸ್ವಾತ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಒಮರ್ ಖಾನ್ ತಿಳಿಸಿದ್ದಾರೆ. ಮೃತರಲ್ಲಿ ಕನಿಷ್ಠ ಐವರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದೂ ಅವರು ಹೇಳಿದ್ದಾರೆ.
ರೆಸ್ಕ್ಯೂ 1122 ಸ್ವಾತ್ ವಕ್ತಾರರ ಪ್ರಕಾರ, ಕಬಲ್ ಆಸ್ಪತ್ರೆಯ ವೈದ್ಯರು ಐದು ಸಾವುಗಳನ್ನು ದೃಢಪಡಿಸಿದ್ದು, ಒಂಭತ್ತು ಮೃತದೇಹಗಳನ್ನು ಸೈದು ಶರೀಫ್ನ ಸೆಂಟ್ರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಕಬಲ್ ಪಟ್ಟಣದಲ್ಲಿ ನಡೆದ ಶಾಂತಿ ರ್ಯಾಲಿಯನ್ನು ಸ್ಥಳೀಯ ಬುಡಕಟ್ಟು ಮಂಡಳಿಯಾದ ಸ್ವಾತ್ ಅಮಾನ್ ಜಿರ್ಗಾ ಆಯೋಜಿಸಿತ್ತು. ಪ್ರದೇಶದಲ್ಲಿ ಶಾಂತಿ ನೆಲೆಸಬೇಕು ಎಂಬ ಆಗ್ರಹದೊಂದಿಗೆ ಭಾಗವಹಿಸಿದ್ದವರು ಉಗ್ರವಾದ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ವಿವಿಧ ಫಲಕಗಳನ್ನು ಹಿಡಿದು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ಉಗ್ರವಾದ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ಡಝನ್ಗಟ್ಟಲೆ ಜನರನ್ನು ಗುರಿಯಾಗಿಸಿಕೊಂಡು ದಾಳಿಕೋರನು ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಖೈಬರ್ ಪಖ್ತುನ್ಖ್ವಾ ಪ್ರಾಂತೀಯ ತುರ್ತು ಸೇವೆಯ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ದಾಳಿಯನ್ನು ಖಂಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಈ ದಾಳಿಯ ಹೊಣೆಗಾರಿಕೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.






