ಮಕ್ಕಾ ಮಸೀದಿಯ ಬಳಿ ‘ಆತ್ಮಹತ್ಯಾ ಬಾಂಬರ್’ ವದಂತಿ ವೀಡಿಯೊ: ‘ಸುಳ್ಳು ಸುದ್ದಿ’ ಎಂದು ಸ್ಪಷ್ಟನೆ ನೀಡಿದ ಸೌದಿ ಅರೇಬಿಯ
ವೀಡಿಯೋ ಪೋಸ್ಟ್ ಮಾಡಿದ್ದ ರಿಪಬ್ಲಿಕ್ ಟಿವಿ

ಸಾಂದರ್ಭಿಕ ಚಿತ್ರ (PTI)
ರಿಯಾದ್: ಮಕ್ಕಾದ ಗ್ರ್ಯಾಂಡ್ ಮಸೀದಿ (ಮಸ್ಜಿದ್ ಅಲ್-ಹರಾಮ್)ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ ಯತ್ನಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ವರದಿಗಳನ್ನು ಸೌದಿ ಅರೇಬಿಯಾ ನಿರಾಕರಿಸಿದೆ.
ಗ್ರ್ಯಾಂಡ್ ಮಸೀದಿಯಲ್ಲಿ ಕಪ್ಪು ಬಣ್ಣದ ಚೀಲ ಹಿಡಿದಿದ್ದಂತೆ ಕಂಡುಬಂದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ನಿಯಂತ್ರಿಸಿ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ಆಧರಿಸಿ, ವ್ಯಕ್ತಿಯೊಬ್ಬ ಆತ್ಮಹತ್ಯಾ ಬಾಂಬರ್ ಆಗಿದ್ದು, ಕಅಬಾದೊಳಗೆ ಸ್ಫೋಟಕ ಜಾಕೆಟ್ ಸ್ಫೋಟಿಸಲು ಯತ್ನಿಸಿದ್ದಾನೆ. ಆದರೆ, ಸ್ಫೋಟಕ ಸಾಧನ ಸ್ಫೋಟಗೊಳ್ಳುವಲ್ಲಿ ವಿಫಲವಾಗಿದೆ ಎಂದು ‘ಆರ್ಟಿ’ (RT), ರಿಪಬ್ಲಿಕ್ ಡಿಜಿಟಲ್ ಸೇರಿದಂತೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ಆತ್ಮಹತ್ಯಾ ಬಾಂಬ್ ದಾಳಿಗೆ ಯತ್ನ ನಡೆದಿಲ್ಲ ಎಂದು ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ಸ್ಪಷ್ಟಪಡಿಸಿದೆ. ಪವಿತ್ರ ನಗರದಲ್ಲಿ ದಾರಿಹೋಕರಿಗೆ ಕಿರುಕುಳ ನೀಡಿ ಅವರಲ್ಲಿ ಭಯ ಮತ್ತು ಆತಂಕ ಮೂಡಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
‘ಈ ಘಟನೆಗೆ ಸಂಬಂಧಿಸಿದಂತೆ ವೈರಲ್ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ಭದ್ರತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯ ಕುರಿತು ಸೌದಿ ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ ಎಂದೂ ತಿಳಿಸಿದ್ದಾರೆ.
ಅಕ್ಟೋಬರ್ 1ರಂದು ‘RT Intl’ನ ಎಕ್ಸ್ ಖಾತೆಯಲ್ಲಿ, ‘ಮಕ್ಕಾದ ಕಅಬಾದೊಳಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ಜಾಕೆಟ್ ಸ್ಫೋಟಿಸಲು ಯತ್ನಿಸಿದ್ದು, ಸಾಧನ ಸ್ಫೋಟಗೊಳ್ಳುವಲ್ಲಿ ವಿಫಲವಾಗಿದೆ’ ಎಂಬ ಅರ್ಥದ ಪೋಸ್ಟ್ ಪ್ರಕಟವಾಗಿತ್ತು. ಈ ವರದಿಯನ್ನೇ ಆಧರಿಸಿ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು. ರಿಪಬ್ಲಿಕ್ ಟಿವಿ (Republic TV) ಕೂಡ ಈ ಬೆಳವಣಿಗೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಮದೀನಾದ ವಿದ್ಯುತ್ ಕೇಂದ್ರದ ಮೇಲೆ ಡ್ರೋನ್ ದಾಳಿ:
ಇದೇ ವೇಳೆ, ಯೆಮೆನ್ ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾದ ಪವಿತ್ರ ನಗರ ಮದೀನಾದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿದ್ದಾರೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ.
ಮದೀನಾದ ‘ತೈಬಾ’ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆದಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಹೇಳಿದೆ. ಈ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಆದರೂ, ದಾಳಿಯಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪವನ್ನು ಹೌದಿಗಳು ನಿರಾಕರಿಸಿದ್ದಾರೆ.
ಯೆಮೆನ್ ನಲ್ಲಿ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲೇ ಮದೀನಾದ ವಿದ್ಯುತ್ ಕೇಂದ್ರದ ಮೇಲಿನ ದಾಳಿಯ ಆರೋಪ ಕೇಳಿಬಂದಿದೆ. ಅಲ್ಲಿನ ಸರ್ಕಾರಿ ಪಡೆಗಳು ಹೌದಿ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿವೆ.






