El Niño | ದೇಶದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುವ ಸಾಧ್ಯತೆ: ‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ ವರದಿ ಎಚ್ಚರಿಕೆ

Photo Credit : AP
ಹೊಸದಿಲ್ಲಿ, ಸೆ.25: ಸೂಪರ್ ಎಲ್ನೀನೊ ಪರಿಣಾಮವಾಗಿ ದೇಶದ ವಿವಿಧೆಡೆ ಬರ, ಅಧಿಕ ಉಷ್ಣಾಂಶ, ಒಣಹವೆ ತಾಂಡವವಾಡತೊಡಗಿದೆ. ಈ ಮಧ್ಯೆ ‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ ಸಂಸ್ಥೆಯ ವರದಿಯೊಂದು ಎಲ್ನೀನೊದಿಂದಾಗಿ ಭಾರತದಲ್ಲಿ ತೀವ್ರ ತಾಪಮಾನದಿಂದಾಗಿ 15 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆಯೆಂದು ಎಚ್ಚರಿಕೆ ನೀಡಿದೆ.
ಯಾವುದೇ ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ, ಸೆಪ್ಟೆಂಬರ್ 2026ರಿಂದ ಫೆಬ್ರವರಿ 2027ರ ನಡುವೆ ಭಾರತದಲ್ಲಿ ಎಲ್ನೀನೊ ಪರಿಣಾಮವಾಗಿ 15,800 ಅಥವಾ 16 ಸಾವಿರ ಮಂದಿ ಸಾವನ್ನಪ್ಪಲಿದ್ದಾರೆಂದು ವರದಿ ಹೇಳಿದೆ. ಈ ಪೈಕಿ ಅರ್ಧಾಂಶದಷ್ಟು ಸಾವುಗಳು ಡಿಸೆಂಬರ್ನಿಂದ ಫೆಬ್ರವರಿವರೆಗಿನ ಮೂರು ತಿಂಗಳುಗಳಲ್ಲಿ ಸಂಭವಿಸಲಿದೆಯೆಂದು ವರದಿ ಹೇಳಿದೆ.
ದೇಶದಲ್ಲಿ ತೀವ್ರ ತಾಪಮಾನದಿಂದಾಗಿ ಅತ್ಯಧಿಕ ಮಂದಿ ಸಾವನ್ನಪ್ಪಬಹುದಾದ ಪ್ರದೇಶಗಳನ್ನು ಕೂಡ ಗುರುತಿಸಿದೆ. ಅಲ್ಲದೆ ಜನರ ಪ್ರಾಣಗಳನ್ನು ರಕ್ಷಿಸಲು ತಕ್ಷಣವೇ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆಯೂ ವರದಿಯು ಗಮನಸೆಳೆದಿದೆ. ತ್ವರಿತವಾಗಿ ಹವಾಮಾನ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸುವುದು, ಹವಾ ಶೀತಲೀಕರಣ ವ್ಯವಸ್ಥೆಗಳನ್ನು ಸುಧಾರಿಸುವುದು, ಕಾರ್ಮಿಕರ ರಕ್ಷಣೆಯ ಕ್ರಮಗಳನ್ನು ವೃದ್ಧಿಸುವುದು ಸೇರಿದಂತೆ ಅಧಿಕ ತಾಪಮಾನದಿಂದಾಗಿ ಸಾವಿನ ಪ್ರಮಾಣವನ್ನು ತಗ್ಗಿಸಲು ವರದಿಯು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ. ಜಾಗತಿಕವಾಗಿ ಒಟ್ಟು 4.51 ಲಕ್ಷ ಮಂದಿ ಎಲ್ನೀನೊ ಪ್ರಕೋಪದಿಂದಾಗಿ ಸಾವನ್ನಪ್ಪುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ.
ಆಫ್ರಿಕಾ ಖಂಡದ ಸಹೇಲ್ ಪ್ರಾಂತದಲ್ಲಿ ಎಲ್ನೀನೊದಿಂದಾಗಿ 66,800 ಮಂದಿ ಸಾವನ್ನಪ್ಪುವ ಸಾಧ್ಯತೆಯಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ನೈಜೀರಿಯಾದಲ್ಲಿ ಸಂಭವಿಸಲಿದೆಯೆಂದು ಅದು ಹೇಳಿದೆ.
ಆಗ್ನೇಯ ಏಶ್ಯದ ರಾಷ್ಟ್ರಗಳಾದ ಫಿಲಿಪ್ಪೀನ್ಸ್, ವಿಯೆಟ್ನಾಂ, ಥೈಲ್ಯಾಂಡ್ ಹಾಗೂ ಕಾಂಬೋಡಿಯಾದಲ್ಲಿ 19,400 ಮಂದಿ ಸಾವನ್ನಪ್ಪುವ ಭೀತಿಯಿದೆ ಎಂದು ವರದಿ ಹೇಳಿದೆ. ಅಲ್ಲದೆ ಇಂಡೊನೇಷ್ಯಾ ದೇಶವೊಂದರಲ್ಲೇ 19,300 ಮಂದಿ ಎಲ್ನೀನೊದಿಂದಾಗಿ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ ಎಂದು ವರದಿ ತಿಳಿಸಿದೆ. ದಕ್ಷಿಣ ಅಮೆರಿಕದ ಬ್ರೆಝಿಲ್ನಲ್ಲಿ 13,300 ಮಂದಿ ಎಲ್ನೀನೊಗೆ ಬಲಿಯಾಗಲಿದ್ದಾರೆ ಎಂದು ‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ ವರದಿ ತಿಳಿಸಿದೆ.






