ಇರಾನ್-ಇಸ್ರೇಲ್ ಸಂಘರ್ಷ | ಹಾರ್ಮುಝ್ ಜಲಸಂಧಿ ಬಳಿ ಮಾರ್ಗ ಬದಲಿಸುತ್ತಿರುವ ತೈಲ ಟ್ಯಾಂಕರ್ಗಳು

Photo | Reuters
ಟೆಹರಾನ್ : ಇರಾನ್ ಮೇಲೆ ಅಮೆರಿಕದ ಮಿಲಿಟರಿ ದಾಳಿಯ ಬಳಿಕ ಹಾರ್ಮುಝ್ ಜಲಸಂಧಿ ಬಳಿ ಯೂಟರ್ನ್ ಹೊಡೆದು ತೈಲ ಸಾಗಾಟದ ಸೂಪರ್-ಟ್ಯಾಂಕರ್ಗಳು ವಾಪಾಸ್ಸಾಗಿದೆ ಎಂದು ಟ್ರ್ಯಾಕಿಂಗ್ ದತ್ತಾಂಶವು ತಿಳಿಸಿದೆ.
ಮೆರೈನ್ ಟ್ರಾಫಿಕ್(MarineTraffic) ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಆರು ದೊಡ್ಡ ತೈಲ ಟ್ಯಾಂಕರ್ಗಳು ಹಾರ್ಮುಝ್ ಜಲಸಂಧಿ ಪ್ರವೇಶಿಸಿದ ನಂತರ ಯೂಟರ್ನ್ ಮಾಡಿ ಮಾರ್ಗವನ್ನು ಬದಲಿಸಿದೆ ಎಂದು ತಿಳಿಸಿದೆ.
ಅಮೆರಿಕದ ದಾಳಿ ಬಳಿಕ ಹಾರ್ಮುಝ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿತ್ತು.
ಕೆಪ್ಲರ್ ಮತ್ತು ಎಲ್ಎಸ್ಇಜಿ ದತ್ತಾಂಶದ ಪ್ರಕಾರ, ರವಿವಾರ ಚೀನಾದ ವೆರಿ ಲಾರ್ಜ್ ಕ್ರೂಡ್ ಕ್ಯಾರಿಯರ್(ವಿಎಲ್ಸಿಸಿ) ಹಾರ್ಮುಝ್ ಜಲಸಂಧಿಯ ಬಳಿ ಯೂ ಟರ್ನ್ ಹೊಡೆದಿದೆ. ಯುಎಇ ಬಂದರು ಝಿರ್ಕು ಕಡೆಗೆ ತನ್ನ ಮಾರ್ಗವನ್ನು ಬದಲಾಯಿಸಿದೆ.
ಇರಾಕ್ನ ಬಸ್ರಾ ಟರ್ಮಿನಲ್ನಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಮತ್ತೊಂದು ವಿಎಲ್ಸಿಸಿ, ತನ್ನ ಮಾರ್ಗವನ್ನು ಬದಲಿಸಿದೆ ಎಂದು ಕೆಪ್ಲರ್ ದತ್ತಾಂಶಗಳು ತಿಳಿಸಿವೆ.
ಹೆಚ್ಚಿನ ಟ್ಯಾಂಕರ್ಗಳು ಈಗ ಒಮಾನ್ ಕರಾವಳಿಯಲ್ಲಿ ಅಥವಾ ಯುಎಇಯ ಬಂದರುಗಳಲ್ಲಿ ನಿಂತುಕೊಂಡಿದೆ. ಹಾರ್ಮುಝ್ ಜಲಸಂಧಿಯನ್ನು ತಪ್ಪಿಸಲು ಟ್ಯಾಂಕರ್ಗಳ ಗುಂಪೊಂದು ಮಾರ್ಗ ಬದಲಾಯಿಸುತ್ತಿರುವುದನ್ನು ಮೆರೈನ್ ಟ್ರಾಫಿಕ್ ಡೇಟಾ ತೋರಿಸುತ್ತದೆ.







