ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈಗೆ ರಶ್ಯಾದಲ್ಲಿ ಚಿಕಿತ್ಸೆ : ವರದಿ

ಮೊಜ್ತಾಬಾ ಖಾಮಿನೈ | PTI
ಟೆಹರಾನ್,ಮಾ.17: ಅಮೆರಿಕ- ಇಸ್ರೇಲ್ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಅವರನ್ನು ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ರಶ್ಯಕ್ಕೆ ಕೊಂಡೊಯ್ಯಲಾಗಿದೆಯೆಂದು ಕುವೈತ್ ನ ಸುದ್ದಿ ಪತ್ರಿಕೆ ಅಲ್ ಜರೀದಾ ವರದಿ ಮಾಡಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯೊಂದರಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅವರು 56 ವರ್ಷ ವಯಸ್ಸಿನ ಮೊಜ್ತಾಬಾ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಭರವಸೆ ನೀಡಿದ ಬಳಿಕ ಅವರನ್ನು ಮಾಸ್ಕೊಗೆ ಸ್ಥಳಾಂತರಿಸಲಾಗಿದೆ. ರಶ್ಯದ ಸೇನಾ ವಿಮಾನವೊಂದರಲ್ಲಿ ಖಾಮಿನೈ ಅವರನ್ನು ಮಾಸ್ಕೊಗೆ ಕೊಂಡೊಯ್ಯಲಾಯಿತೆಯೆಂದು ವರದಿ ಹೇಳಿದೆ.
ಆದಾಗ್ಯೂ ರಶ್ಯವು ಈ ವರದಿಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ‘‘ ಇಂತಹ ವರದಿಗಳ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ’’ ಎಂದು ರಶ್ಯ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೊವ್ ಅವರು ರಶ್ಯದ ತಾಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ಇರಾನ್ನ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕೆಲವು ಮೂಲಗಳ ಪ್ರಕಾರ ಮೊಜ್ತಾಬಾ ಅವರ ಕೈ, ಕಾಲಿಗೆ ತೀವ್ರ ಗಾಯಗಳಾಗಿವೆಯೆನ್ನಲಾಗಿದೆ.







