ಸ್ವಿಟ್ಜರ್ಲ್ಯಾಂಡ್: ರೈಲು ಪ್ರಯಾಣಿಕರ ಒತ್ತೆಸೆರೆಗೆ ಯತ್ನಿಸಿದ ಆರೋಪಿಯ ಹತ್ಯೆ

Photo: NDTV
ಬರ್ನ್ : ಸ್ವಿಝರ್ಲ್ಯಾಂಡ್ನ ರೈಲಿನಲ್ಲಿ 15 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹತ್ಯೆ ಮಾಡಿದ್ದು ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ಸ್ವಿಝರ್ಲ್ಯಾಂಡ್ನ ಯುವೆರ್ಡನ್ ನಗರದಿಂದ ಸೈಂಟ್ ಕ್ರೊಯಿಕ್ಸ್ಗೆ ಪ್ರಯಾಣಿಸುತ್ತಿದ್ದ ರೈಲು ಎಸರ್ಟ್-ಸುವೋಸ್ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಮಚ್ಚು ಮತ್ತು ಚೂರಿ ಹಿಡಿದಿದ್ದ ವ್ಯಕ್ತಿಯೊಬ್ಬ ಏಕಾಏಕಿ ರೈಲಿನ ಬೋಗಿಯೊಂದಕ್ಕೆ ನುಗ್ಗಿ ಅಲ್ಲಿದ್ದ ಅಧಿಕಾರಿ ಹಾಗೂ 14 ಪ್ರಯಾಣಿಕರನ್ನು ಬೆದರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಶರಣಾಗುವಂತೆ ಆತನ ಮನವೊಲಿಸಲು ಸುಮಾರು 4 ಗಂಟೆ ಪೊಲೀಸರು ಪ್ರಯತ್ನಿಸಿದ್ದು ವಿಫಲವಾದಾಗ ಬೋಗಿಯನ್ನು ಪ್ರವೇಶಿಸಿದ್ದಾರೆ. ಆಗ ಆರೋಪಿ ಪೊಲೀಸರ ಮೇಲೆ ಮಚ್ಚಿನಿಂದ ದಾಳಿ ನಡೆಸಲು ಮುಂದಾಗಿದ್ದು ಪೊಲೀಸರು ಹಾರಿಸಿದ ಗುಂಡಿನಿಂದ ಸಾವನ್ನಪ್ಪಿದ್ದಾನೆ. ಎಲ್ಲಾ ಒತ್ತೆಯಾಳುಗಳೂ ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದಾರೆ.
ಆರೋಪಿಯ ಗುರುತು ಪತ್ತೆಯಾಗಿದೆ, ಆದರೆ ಆತನ ಕೃತ್ಯಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.





