ಇರಾನ್ ಮೇಲಿನ ದಾಳಿಗೆ ಬೆಂಬಲವಿಲ್ಲ; ತನ್ನ ವಾಯುಪ್ರದೇಶ ಬಳಸಬೇಡಿ: ಅಮೆರಿಕದ ಮನವಿ ತಿರಸ್ಕರಿಸಿದ ಸ್ವಿಟ್ಝರ್ ಲ್ಯಾಂಡ್

ಬರ್ನ್: ಇರಾನ್ ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಮಿಲಿಟರಿ ಕಾರ್ಯಾಚರಣೆಗಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವಂತೆ ಅಮೆರಿಕ ಸಲ್ಲಿಸಿದ್ದ ಎರಡು ಮನವಿಗಳನ್ನು ಸ್ವಿಟ್ಝರ್ ಲ್ಯಾಂಡ್ ಸರ್ಕಾರ ತಿರಸ್ಕರಿಸಿದೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಸ್ವಿಸ್ ಫೆಡರಲ್ ಕೌನ್ಸಿಲ್ ಪ್ರಕಟಣೆ ನೀಡಿದ್ದು, ಅಮೆರಿಕದಿಂದ ಮಿಲಿಟರಿ ಕಾರ್ಯಾಚರಣೆಗಾಗಿ ತಮ್ಮ ವಾಯುಪ್ರದೇಶವನ್ನು ಬಳಸಲು ಅನುಮತಿ ಕೋರಿ ಬಂದ ಮನವಿಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದೆ.
“ತಟಸ್ಥತೆಯ ಕಾನೂನಿನ ಆಧಾರದ ಮೇಲೆ, ಇರಾನ್ ನಲ್ಲಿನ ಯುದ್ಧಕ್ಕಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಸಂಬಂಧಿಸಿದಂತೆ ಸಲ್ಲಿಸಲಾದ ಎರಡು ವಿನಂತಿಗಳನ್ನು ತಿರಸ್ಕರಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದಕ್ಕೆ ಹೊರತಾಗಿ, ನಿರ್ವಹಣಾ ಹಾರಾಟ ಮತ್ತು ಸಾರಿಗೆ ವಿಮಾನಗಳಿಗೆ ಸಂಬಂಧಿಸಿದಂತೆ ವಾಯುಪ್ರದೇಶವನ್ನು ಬಳಸುವ ಎರಡು ವಿನಂತಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸ್ವಿಸ್ ಸರ್ಕಾರ ಸ್ಪಷ್ಟಪಡಿಸಿದೆ.
ಸ್ವಿಟ್ಝರ್ ಲ್ಯಾಂಡ್ ತನ್ನ ತಟಸ್ಥ ನೀತಿಯನ್ನು ಮುಂದುವರಿಸಿದ್ದು, ಯುದ್ಧ ಸಂಬಂಧಿತಂತೆ ಮಿಲಿಟರಿ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ.





