ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದ ಸಿರಿಯಾ ಅಧ್ಯಕ್ಷ ಅಲ್-ಶರಾ

Photo: AFP
ವಾಷಿಂಗ್ಟನ್, ನ.11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿದ್ದು ಸಿರಿಯಾ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು, ಅವುಗಳನ್ನು ಅಭಿವೃದ್ಧಿಗೊಳಿಸಿ ಬಲಪಡಿಸುವ ಮಾರ್ಗಗಳು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ.
ಸಿರಿಯಾ ಮೇಲಿನ ನಿರ್ಬಂಧವನ್ನು 6 ತಿಂಗಳು ಅಮಾನತುಗೊಳಿಸುವುದಾಗಿ ಅಮೆರಿಕದ ಖಜಾನೆ ಇಲಾಖೆ ಘೋಷಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. 1946ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಸಿರಿಯಾದ ನಾಯಕರೊಬ್ಬರು ಅಮೆರಿಕಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದ್ದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ನಾಟಕೀಯ ಬದಲಾವಣೆಯನ್ನು ಸೂಚಿಸುತ್ತದೆ.
`ಸಿರಿಯಾವನ್ನು ಯಶಸ್ವಿಗೊಳಿಸಲು ನಾವು ಎಲ್ಲವನ್ನೂ ಮಾಡುತ್ತೇವೆ' ಎಂದು ಸಭೆಯ ಬಳಿಕ ಟ್ರಂಪ್ ಹೇಳಿದ್ದಾರೆ. ಐಸಿಸ್ ವಿರುದ್ಧ ಜಾಗತಿಕ ಒಕ್ಕೂಟದ 90ನೇ ಸದಸ್ಯನಾಗಿ ಸಿರಿಯಾ ಸೇರ್ಪಡೆಗೊಳ್ಳಲಿದೆ. ವಾಷಿಂಗ್ಟನ್ ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಪುನರಾರಂಭಿಸಲು ಅಮೆರಿಕ ಅನುಮತಿ ನೀಡಲಿದೆ ಎಂದು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.





