ಇಸ್ರೇಲ್ ದಾಳಿಯಿಂದ ಹೊಸ ಬಿಕ್ಕಟ್ಟು : ವಿಶ್ವಸಂಸ್ಥೆಯಲ್ಲಿ ಸಿರಿಯಾ ಅಧ್ಯಕ್ಷ ಅಲ್-ಶರಾ

Photo Credit - Yuki Iwamura/AP
ನ್ಯೂಯಾರ್ಕ್, ಸೆ.25: ಸಿರಿಯಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಈ ವಲಯದಲ್ಲಿ ಹೊಸ ಬಿಕ್ಕಟ್ಟನ್ನು ಪ್ರಚೋದಿಸುವ ಭೀತಿ ಮೂಡಿಸಿದೆ ಎಂದು ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು `ನನ್ನ ದೇಶದ ವಿರುದ್ಧ ಇಸ್ರೇಲ್ನ ದಾಳಿ ಮತ್ತು ಆಕ್ರಮಣಗಳು ಮುಂದುವರಿದಿವೆ. ಇಸ್ರೇಲ್ನ ನೀತಿಗಳು ಸಿರಿಯಾವನ್ನು ಬೆಂಬಲಿಸುವ ಅಂತರಾಷ್ಟ್ರೀಯ ಸಮುದಾಯದ ನೀತಿಗೆ ವಿರುದ್ಧವಾಗಿವೆ. ಇಸ್ರೇಲ್ನ ಆಕ್ರಮಣಗಳು ನಮ್ಮ ವಲಯದಲ್ಲಿ ಹೊಸ ಬಿಕ್ಕಟ್ಟು ಮತ್ತು ಸಂಘರ್ಷಗಳ ಬೆದರಿಕೆ ಒಡ್ಡಿವೆ. ಆದರೆ ಇಸ್ರೇಲ್ನ ಆಕ್ರಮಣಶೀಲತೆಯ ಹೊರತಾಗಿಯೂ ಸಿರಿಯಾ ಮಾತುಕತೆಗೆ ಬದ್ಧವಾಗಿದೆ. ಈ ದಾಳಿಗಳ ಹಿನ್ನೆಲೆಯಲ್ಲಿ ನಮ್ಮೊಂದಿಗೆ ನಿಲ್ಲುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತೇವೆ' ಎಂದು ಹೇಳಿದರು. ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್ನಲ್ಲಿ ವಿಶ್ವಸಂಸ್ಥೆ ಮೇಲ್ವಿಚಾರಣೆಯ ಬಫರ್ ವಲಯದ ಮೂಲಕ ಸಿರಿಯಾ ಮತ್ತು ಇಸ್ರೇಲ್ ಪಡೆಗಳನ್ನು ಪ್ರತ್ಯೇಕಿಸುವ 1974ರ ಒಪ್ಪಂದಕ್ಕೆ ಸಿರಿಯಾ ಬದ್ಧವಾಗಿದೆ ಎಂದವರು ಹೇಳಿದ್ದಾರೆ. ಅಲ್-ಶರಾ ಕಳೆದ 60 ವರ್ಷಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿರಿಯಾದ ಮೊದಲ ಅಧ್ಯಕ್ಷರೆಂಬ ಹೆಗ್ಗಳಿಕೆ ಹೊಂದಿದ್ದಾರೆ.





