ಭಾರತಕ್ಕೆ ಹಸ್ತಾಂತರಿಸದಂತೆ ಕೋರಿ ತಹವ್ವುರ್ ರಾಣಾ ಸಲ್ಲಿಸಿದ ಮನವಿ ತಿರಸ್ಕರಿಸಿದ ಅಮೆರಿಕದ ಸುಪ್ರೀಂ ಕೋರ್ಟ್

PC: x.com/cozyduke_apt29
ವಾಶಿಂಗ್ಟನ್ : 2008ರ ಮುಂಬೈ ಸ್ಪೋಟ ಪ್ರಕರಣದ ಶಂಕಿತ ಆರೋಪಿ ತಹವ್ವುರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಹವ್ವುರ್ ರಾಣಾ ಹಸ್ತಾಂತರಕ್ಕೆ ಸಮ್ಮತಿಸಿದ್ದರು.
ತಹವ್ವುರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯುವಂತೆ ಕೋರಿ ಅಮೆರಿಕದ ಸುಪ್ರೀಂ ಕೋರ್ಟ್ಗೆ ತುರ್ತು ಅರ್ಜಿಯನ್ನು ಸಲ್ಲಿಸಿದ್ದ. ಪಾಕಿಸ್ತಾನಿ ಮೂಲದ ಮುಸ್ಲಿಂ ಆಗಿರುವುದರಿಂದ ಭಾರತದಲ್ಲಿ ತನಗೆ ಚಿತ್ರಹಿಂಸೆ ನೀಡುವ ಸಾಧ್ಯತೆ ಇದೆ. ಆದ್ದರಿಂದ ಭಾರತಕ್ಕೆ ಹಸ್ತಾಂತರಿಸುವುದಕ್ಕೆ ತಡೆ ನೀಡುವಂತೆ ತಹವ್ವುರ್ ರಾಣಾ ಮನವಿ ಮಾಡಿಕೊಂಡಿದ್ದ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾದ ರಾಣಾ ಈ ಮೊದಲು ಗಡಿಪಾರು ಪ್ರಕ್ರಿಯೆಯನ್ನು ಕೆಳಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಆದರೆ, ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಫಾರ್ ನೈಂತ್ ಸರ್ಕ್ಯೂಟ್ ಆತನ ಅರ್ಜಿಯನ್ನು ವಜಾ ಮಾಡಿತ್ತು. ಭಾರತ ಮತ್ತು ಅಮೆರಿಕ ನಡುವಿನ ಗಡಿಪಾರು ಒಪ್ಪಂದವು ರಾಣಾ ಗಡಿಪಾರನ್ನು ಅನುಮತಿಸುತ್ತದೆ ಎಂದು ಕೊರ್ಟ್ ಹೇಳಿತ್ತು. ಇದರಿಂದ ನವೆಂಬರ್ 13ರಂದು ರಾಣಾ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಈ ಅರ್ಜಿಯು ಗಡಿಪಾರಿನಿಂದ ತಪ್ಪಿಸಿಕೊಳ್ಳಲು ಇರುವ ಕೊನೆಯ ಕಾನೂನಾತ್ಮಕ ಪ್ರಯತ್ನವಾಗಿತ್ತು.







