ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟ: ಅಮೆರಿಕಾದ ರಕ್ಷಣಾ ಸಂಸ್ಥೆಗಳಿಗೆ ಚೀನಾ ನಿರ್ಬಂಧ

ಸಾಂದರ್ಭಿಕ ಚಿತ್ರ | Photo Credit : freepik.com
ಬೀಜಿಂಗ್, ಡಿ.26: ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟದ ವಿಷಯಕ್ಕೆ ಸಂಬಂಧಿಸಿ ಅಮೆರಿಕಾದ 20 ರಕ್ಷಣಾ ಸಂಸ್ಥೆಗಳು ಹಾಗೂ 10 ವ್ಯಕ್ತಿಗಳ ಮೇಲೆ ಚೀನಾದ ವಿದೇಶಾಂಗ ಇಲಾಖೆ ಶುಕ್ರವಾರ ನಿರ್ಬಂಧ ಘೋಷಿಸಿದೆ.
ಈ ಸಂಸ್ಥೆಗಳು ಮತ್ತು ವ್ಯಕ್ತಿಗಳು ಚೀನಾದಲ್ಲಿ ಹೊಂದಿರುವ ಯಾವುದೇ ಸ್ವತ್ತುಗಳನ್ನು ಈ ಕ್ರಮವು ಸ್ಥಂಭನಗೊಳಿಸುತ್ತದೆ ಹಾಗೂ ದೇಶೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಅವರೊಂದಿಗೆ ವ್ಯಾಪಾರ ಮಾಡುವುದನ್ನು ನಿರ್ಬಂಧಿಸುತ್ತದೆ. ಪಟ್ಟಿಯಲ್ಲಿರುವ ವ್ಯಕ್ತಿಗಳು ಹಾಗೂ ನಿರ್ಬಂಧಿತ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಚೀನಾ ಪ್ರವೇಶಿಸುವುದನ್ನು ನಿಷೇಧಿಸುತ್ತದೆ. ಅಂದೂರಿಲ್ ಇಂಡಸ್ಟ್ರೀಸ್, ನಾರ್ಥ್ರಾಪ್ ಗ್ರಮ್ಮನ್ ಸಿಸ್ಟಮ್ಸ್ ಕಾರ್ಪೊರೇಷನ್, ಎಲ್3 ಹ್ಯಾರಿಸ್ ಮಾರಿಟೈಮ್ ಸರ್ವಿಸಸ್ ನಿರ್ಬಂಧಕ್ಕೆ ಒಳಗಾದ ಸಂಸ್ಥೆಗಳ ಪಟ್ಟಿಯಲ್ಲಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕಳೆದ ವಾರ ತೈವಾನ್ಗೆ 11.1 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟ ಒಪ್ಪಂದವನ್ನು ಅಮೆರಿಕಾ ಘೋಷಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಚೀನಾ `ತೈವಾನ್ ವಿಷಯವು ಚೀನಾದ ಪ್ರಮುಖ ಹಿತಾಸಕ್ತಿಯಾಗಿದೆ ಮತ್ತು ಚೀನಾ-ಅಮೆರಿಕಾ ಸಂಬಂಧಗಳಲ್ಲಿ ದಾಟಲಾಗದ ಮೊದಲ ಕೆಂಪು ಗೆರೆಯಾಗಿದೆ. ತೈವಾನ್ ವಿಷಯದ ಗಡಿಯನ್ನು ದಾಟುವ ಯಾವುದೇ ಪ್ರಚೋದನಕಾರಿ ಕ್ರಮಗಳು ಚೀನಾದಿಂದ ಬಲವಾದ ಪ್ರತಿಕ್ರಿಯೆಯನ್ನು ಪಡೆಯುತ್ತದೆ' ಎಂದು ಎಚ್ಚರಿಕೆ ನೀಡಿದೆ.





