ತಜಿಕಿಸ್ತಾನ್ | ಜೈಲಿನಲ್ಲಿ ದಂಗೆಗೆ ಪ್ರಯತ್ನ ನಡೆಸಿದ ಐವರು ಕೈದಿಗಳ ಹತ್ಯೆ

ಸಾಂದರ್ಭಿಕ ಚಿತ್ರ
ದುಶಾನ್ಬೆ: ತಜಿಕಿಸ್ತಾನ್ನ ಜೈಲಿನ ಕಾವಲುಗಾರರ ಮೇಲೆ ಚೂರಿಯಿಂದ ದಾಳಿ ನಡೆಸಿ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕನಿಷ್ಠ ಐವರು ಕೈದಿಗಳು ಭದ್ರತಾ ಸಿಬ್ಬಂದಿ ಜತೆಗಿನ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಭದ್ರತಾ ಸಿಬ್ಬಂದಿಗಳಿಗೆ ಗಾಯವಾಗಿದ್ದು ಜೈಲು ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಜಿಕಿಸ್ತಾನದ ರಾಜಧಾನಿ ದುಶಾನ್ಬೆಯಿಂದ ಸುಮಾರು 20 ಕಿ.ಮೀ ದೂರದ ಜೈಲಿನಲ್ಲಿ 9 ಕೈದಿಗಳು ಚೂರಿಯಿಂದ ಕಾವಲುಗಾರರ ಮೇಲೆ ದಾಳಿ ನಡೆಸಿದ್ದು ದಂಗೆ ನಡೆಸಿ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಕೈದಿಗಳು ಐಸಿಸ್ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ದಾಳಿಯಲ್ಲಿ ಜೈಲಿನ ಅಧಿಕಾರಿ ಸಹಿತ ಮೂವರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತರ ಇಬ್ಬರು ಭದ್ರತಾ ಸಿಬ್ಬಂದಿ ಗೆ ಅಲ್ಪಪ್ರಮಾಣದಲ್ಲಿ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಯಲ್ಲಿ ಐವರು ಕೈದಿಗಳು ಸಾವನ್ನಪ್ಪಿದ್ದು ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಯಾವುದೇ ಗುಂಪು ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ ಎಂದು ಕಾನೂನು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.