ಪಾಕಿಸ್ತಾನದ ಮೂಲಕ ಮಾತುಕತೆ ಮುಂದುವರಿದಿದೆ: ಇರಾನ್

Photo Credit : PTI
ಟೆಹರಾನ್, ಮೇ 18: ಯುದ್ಧವನ್ನು ಕೊನೆಗೊಳಿಸುವ ಉದ್ದೇಶ ಹೊಂದಿರುವ ಅಮೆರಿಕದ ಹೊಸ ಪ್ರಸ್ತಾವನೆಗೆ ಉತ್ತರ ರವಾನಿಸಿದ್ದು, ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಮೂಲಕ ಅಮೆರಿಕದೊಂದಿಗಿನ ಮಾತುಕತೆಗಳು ಮುಂದುವರಿದಿವೆ ಎಂದು ಇರಾನ್ ಸೋಮವಾರ ದೃಢಪಡಿಸಿದೆ.
ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸೀಮಿತಗೊಳಿಸಬೇಕು ಮತ್ತು ತನ್ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಅಮೆರಿಕಕ್ಕೆ ಸ್ಥಳಾಂತರಿಸಬೇಕು ಎಂದು ಅಮೆರಿಕ ಬಯಸಿದೆ. ಆದರೆ ಸ್ಥಂಭನಗೊಳಿಸಿರುವ ಇರಾನ್ ನ ಸ್ವತ್ತುಗಳನ್ನು ಬಿಡುಗಡೆಗೊಳಿಸಲು ಮತ್ತು ಯುದ್ಧದ ಹಾನಿಗೆ ಪರಿಹಾರ ನೀಡಲು ಅಮೆರಿಕ ನಿರಾಕರಿಸಿರುವುದಾಗಿ ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ವಿಶ್ವದ ಮಹತ್ವದ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಸಂಧಿಯನ್ನು ನಿರ್ವಹಿಸಲು ಹೊಸ ಸಂಸ್ಥೆಯನ್ನು ಇರಾನ್ ಘೋಷಿಸಿದೆ. ‘ದಿ ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ’ (ಪಿಜಿಎಸ್ಎ– ಪರ್ಷಿಯನ್ ಗಲ್ಫ್ ಜಲಸಂಧಿ ಪ್ರಾಧಿಕಾರ) ಜಲಸಂಧಿಯ ನಿರ್ವಹಣೆ ಮತ್ತು ಬೆಳವಣಿಗೆಗಳ ಬಗ್ಗೆ ಮಾಹಿತಿ ಒದಗಿಸಲಿದೆ. ಸಂಸ್ಥೆಯು ಜಲಮಾರ್ಗದ ಮೇಲಿನ ನಿಯಂತ್ರಣವನ್ನು ಬಲಪಡಿಸುವ ಇರಾನ್ ನ ಪ್ರಯತ್ನದ ಭಾಗವಾಗಿದ್ದು, ಹಡಗುಗಳು ಹೊಸ ನಿಯಮಗಳು ಮತ್ತು ಶುಲ್ಕಗಳನ್ನು ಎದುರಿಸಬಹುದು. ಇದು ಹಾರ್ಮುಝ್ ಜಲಸಂಧಿಯ ಮೇಲೆ ಸಾರ್ವಭೌಮತ್ವವನ್ನು ಚಲಾಯಿಸುವ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದು ವರದಿ ಹೇಳಿದೆ.
ಇರಾನ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
• ಸೌದಿ ಅರೆಬಿಯಾ ಮತ್ತು ಯುಎಇ ಮೇಲೆ ರವಿವಾರ ಡ್ರೋನ್ ದಾಳಿ ನಡೆದಿರುವುದಾಗಿ ವರದಿಯಾಗಿದ್ದು, ಗಲ್ಫ್ನಾದ್ಯಂತ ಉದ್ವಿಗ್ನತೆ ಹೆಚ್ಚಿದೆ.
• ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧದ ಬೆದರಿಕೆಗಳನ್ನು ನವೀಕರಿಸುತ್ತಿದ್ದಂತೆಯೇ, ಇರಾನ್ ನಾಗರಿಕರನ್ನು ಶಸ್ತ್ರಸಜ್ಜಿತಗೊಳಿಸುತ್ತಿದ್ದು, ಶಸ್ತ್ರಾಸ್ತ್ರಗಳ ತರಬೇತಿಯನ್ನು ನೀಡುತ್ತಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
• ದೇಶದಾದ್ಯಂತ ಅಮೆರಿಕದ ವಿರುದ್ಧ ನಡೆಯುತ್ತಿರುವ ರ್ಯಾಲಿಗಳಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
• ಜರ್ಮನಿಯ ಸೇನಾ ನೆಲೆಯಿಂದ ಶಸ್ತ್ರಾಸ್ತ್ರಗಳನ್ನು ಹೊತ್ತುತಂದ ಅಮೆರಿಕದ ಹತ್ತಕ್ಕೂ ಹೆಚ್ಚು ಸರಕು ವಿಮಾನಗಳು ಇಸ್ರೇಲ್ನ ಟೆಲ್ಅವೀವ್ನಲ್ಲಿ ಲ್ಯಾಂಡ್ ಆಗಿವೆ. ಇದು ಇರಾನ್ ಮೇಲೆ ಯುದ್ಧವನ್ನು ಪುನರಾರಂಭಿಸುವ ಸಿದ್ಧತೆಗಳ ಭಾಗವಾಗಿದೆ ಎಂದು ಇಸ್ರೇಲ್ನ ಚಾನೆಲ್ 13 ಸುದ್ದಿವಾಹಿನಿಯನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.
• ಇರಾನ್ ಮೇಲಿನ ಅಮೆರಿಕದ ದಾಳಿಯಲ್ಲಿ ಸೇರಲು ಇಸ್ರೇಲಿ ಮಿಲಿಟರಿ ತಯಾರಿ ನಡೆಸುತ್ತಿದೆ. ಅಮೆರಿಕ ನಡೆಸುವ ದಾಳಿಗಳಿಗೆ ಇಸ್ರೇಲ್ ಕೂಡ ಕೈಜೋಡಿಸಲಿದ್ದು, ಇರಾನ್ ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಲಿದೆ ಎಂದು ಇಸ್ರೇಲ್ನ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ ಹೇಳಿದೆ.
• ಅಮೆರಿಕದ ಧ್ವಜದೊಂದಿಗೆ ಮಧ್ಯಪ್ರಾಚ್ಯದ ನಕ್ಷೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಲವಾರು ಬಾಣಗಳು ಇರಾನ್ ನತ್ತ ಕೇಂದ್ರೀಕೃತವಾಗಿದ್ದು, ಇರಾನ್ ಮೇಲಿನ ದಾಳಿಯನ್ನು ಪುನರಾರಂಭಿಸುವ ಮತ್ತೊಂದು ಸಾರ್ವಜನಿಕ ಬೆದರಿಕೆಯ ಸಂದೇಶ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.






