ಇರಾನ್ ಮನವಿ ಮೇರೆಗೆ ದೋಹಾದಲ್ಲಿ ನಾಳೆ ಮಾತುಕತೆ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ಮಾತುಕತೆಗೆ ಮನವಿ ಮಾಡಿದ್ದು, ಕತಾರ್ನ ದೋಹಾದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇರಾನ್ ಮಾತುಕತೆ ನಡೆಸಲು ಆಸಕ್ತಿ ವ್ಯಕ್ತಪಡಿಸಿದೆ. ದೋಹಾದಲ್ಲಿ ಸಭೆ ನಡೆಯಲಿದೆ" ಎಂದು ಹೇಳಿದ್ದಾರೆ. ಆದರೆ, ಸಭೆಯಲ್ಲಿ ಭಾಗವಹಿಸುವವರ ವಿವರ ಅಥವಾ ಚರ್ಚೆಯ ವಿಷಯವನ್ನು ಅವರು ಬಹಿರಂಗಪಡಿಸಿಲ್ಲ.
ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಲೆಬನಾನ್ನಲ್ಲಿ ಇಸ್ರೇಲ್ನ ಸೇನಾ ಕ್ರಮಗಳು ಮುಂದುವರಿದಿರುವುದಕ್ಕೆ ಇರಾನ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ವ್ಯಕ್ತವಾಗಿದ್ದು, ದೋಹಾದಲ್ಲಿ ನಡೆಯಲಿರುವ ಮಾತುಕತೆ ಪರಿಸ್ಥಿತಿ ಶಮನಕ್ಕೆ ನೆರವಾಗಬಹುದೇ ಎಂಬುದರತ್ತ ಜಾಗತಿಕ ಸಮುದಾಯದ ಗಮನ ಕೇಂದ್ರೀಕೃತವಾಗಿದೆ.




