Tamil Nadu | ಕೋಮುವಾದಿ ಶಕ್ತಿಗಳನ್ನು ಮೈತ್ರಿಕೂಟದಿಂದ ದೂರವಿಡುವ ಷರತ್ತಿನೊಂದಿಗೆ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಘೋಷಣೆ

ರಾಹುಲ್ ಗಾಂಧಿ, ವಿಜಯ್ | Photo credit : PTI
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ತಮಿಳುಗ ವೆಟ್ರಿ ಕಳಗಂ (ಟಿವಿಕೆ)ಗೆ ಸಂಪೂರ್ಣ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಮಿಳುನಾಡು ಕಾಂಗ್ರೆಸ್ ಪ್ರಕಟಿಸಿದೆ.
ಟಿವಿಕೆ ಅಧ್ಯಕ್ಷ ಸಿ. ವಿಜಯ್ ಅವರು ಕಾಂಗ್ರೆಸ್ ಗೆ ಔಪಚಾರಿಕ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ತಮಿಳುನಾಡಿನ ಜನತೆ, ವಿಶೇಷವಾಗಿ ಯುವಜನತೆ, ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇಡುವ ಜಾತ್ಯತೀತ, ಪ್ರಗತಿಪರ ಹಾಗೂ ಕಲ್ಯಾಣಪರ ಸರ್ಕಾರಕ್ಕೆ ಸ್ಪಷ್ಟ ಮತ್ತು ಭಾರೀ ಜನಾದೇಶ ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಮುಂದಿನ ಸರ್ಕಾರ ರಚನೆಗೆ ವಿಜಯ್ ನೇತೃತ್ವದ ಟಿವಿಕೆಯನ್ನು ಜನರು ಆಯ್ಕೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶದಲ್ಲಿ ಜಾತ್ಯತೀತ, ಪ್ರಗತಿಪರ ಹಾಗೂ ಕಲ್ಯಾಣಪರ ರಾಜಕೀಯದ ಸ್ಥಾಪಕ ಶಕ್ತಿಯಾಗಿದೆ. ತಮಿಳುನಾಡಿನ ಜನರ ಈ ತೀರ್ಪನ್ನು ಗೌರವಿಸಿ, ಅದನ್ನು ಸಾಕಾರಗೊಳಿಸಲು ನೆರವಾಗುವುದು ನಮ್ಮ ಸಾಂವಿಧಾನಿಕ ಕರ್ತವ್ಯ’. ಅದರಂತೆ, ಸರ್ಕಾರ ರಚನೆಗೆ ಟಿವಿಕೆಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಆದರೆ, ಭಾರತದ ಸಂವಿಧಾನದಲ್ಲಿ ನಂಬಿಕೆ ಇಡದ ಯಾವುದೇ ಕೋಮುವಾದಿ ಶಕ್ತಿಗಳನ್ನು ಈ ಮೈತ್ರಿಕೂಟದಿಂದ ದೂರವಿಡುವ ಷರತ್ತಿನ ಮೇರೆಗೆ ಕಾಂಗ್ರೆಸ್ ಬೆಂಬಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಟಿವಿಕೆ–ಕಾಂಗ್ರೆಸ್ ಮೈತ್ರಿಯು ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ತತ್ವಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಬದ್ಧವಾಗಿರಲಿದೆ. ಜೊತೆಗೆ, ಪೆರುಂತಲೈವರ್ ಕಾಮರಾಜ್ ಕಾಲದ ತಮಿಳುನಾಡಿನ ವೈಭವವನ್ನು ಮರಳಿ ತರಲು ಶ್ರಮಿಸಲಿದೆ. ಪರಸ್ಪರ ಗೌರವ, ಸೂಕ್ತ ಹಂಚಿಕೆ ಹಾಗೂ ಹಂಚಿಕೆಯ ಜವಾಬ್ದಾರಿಯ ಆಧಾರದ ಮೇಲೆ ಈ ಮೈತ್ರಿ ರೂಪುಗೊಂಡಿದ್ದು, ಕೇವಲ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗದೇ ಸ್ಥಳೀಯ ಸಂಸ್ಥೆಗಳು, ಲೋಕಸಭೆ ಮತ್ತು ರಾಜ್ಯಸಭೆಯ ಭವಿಷ್ಯದ ಚುನಾವಣೆಯಲ್ಲಿಯೂ ಮುಂದುವರಿಯಲಿದೆ.
ತಮಿಳುನಾಡಿನ ಜನರು ನೀಡಿರುವ ಈ ಐತಿಹಾಸಿಕ ಜನಾದೇಶವನ್ನು ಗೌರವಿಸುವುದಾಗಿ ಹಾಗೂ ವಿಶೇಷವಾಗಿ ಯುವಕರ ಆಶಯ ಮತ್ತು ನಿರೀಕ್ಷೆಗಳನ್ನು ಈಡೇರಿಸಲು ಬದ್ಧರಾಗಿರುವುದಾಗಿ ಟಿವಿಕೆ ಅಧ್ಯಕ್ಷ ವಿಜಯ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಂಟಿಯಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






