ಪುಟಿನ್ ನಿವಾಸದ ಮೇಲೆ ಡ್ರೋನ್ ದಾಳಿ| ಸಂಧಾನ ಪ್ರಕ್ರಿಯೆಯ ಹಳಿತಪ್ಪಿಸಲು ಉಕ್ರೇನ್ನಿಂದ ತಂತ್ರ: ರಶ್ಯ ಆರೋಪ

ವ್ಲಾದಿಮಿರ್ ಪುಟಿನ್ | Photo Credit : AP \ PTI
ಮಾಸ್ಕೋ, ಡಿ.30: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ನ ಡ್ರೋನ್ ದಾಳಿಯ ಪ್ರಯತ್ನದ ಹೊರತಾಗಿಯೂ ರಶ್ಯವು ಶಾಂತಿ ಮಾತುಕತೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ರಶ್ಯದ ನೊವ್ಗೊರೊಡ್ ಪ್ರಾಂತದಲ್ಲಿರುವ ಪುಟಿನ್ ಅವರ ಸರಕಾರಿ ನಿವಾಸದ ಮೇಲೆ ಡಿಸೆಂಬರ್ 28ರ ಮಧ್ಯರಾತ್ರಿಯಿಂದ 29ರ ಬೆಳಿಗ್ಗಿನ ಅವಧಿಯಲ್ಲಿ ಡ್ರೋನ್ ದಾಳಿ ನಡೆಸಲು ಉಕ್ರೇನ್ ಪ್ರಯತ್ನಿಸಿದೆ ಎಂದು ರಶ್ಯ ಆರೋಪಿಸಿತ್ತು. ವರದಿಯಾದ ಡ್ರೋನ್ ದಾಳಿಯು ಉಕ್ರೇನ್ ಯುದ್ದವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಯಾವುದೇ ಸಂಭಾವ್ಯ ಶಾಂತಿ ಮಾತುಕತೆಗಳಲ್ಲಿ ರಶ್ಯದ ನಿಲುವನ್ನು ಬಲಪಡಿಸುತ್ತದೆ ಎಂದು ಪೆಸ್ಕೋವ್ ಹೇಳಿದ್ದಾರೆ.
ಡ್ರೋನ್ ದಾಳಿಯನ್ನು ಪುಟಿನ್ ವಿರುದ್ಧ ಮಾತ್ರವಲ್ಲ, ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳ ವಿರುದ್ಧವೂ ನಿರ್ದೇಶಿಸಲಾಗಿದೆ. ಈ ಭಯೋತ್ಪಾದಕ ಕೃತ್ಯವು ಸಂಧಾನ ಪ್ರಕ್ರಿಯೆಯನ್ನು ಬುಡಮೇಲುಗೊಳಿಸುವ ಉದ್ದೇಶವನ್ನೂ ಹೊಂದಿತ್ತು. ಆದರೆ ರಶ್ಯವು ಸಂಧಾನ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ನಾವು ಪ್ರಾಥಮಿಕವಾಗಿ ಅಮೆರಿಕಾದೊಂದಿಗೆ ಮಾತುಕತೆಗಳನ್ನು ಮುಂದುವರಿಸುತ್ತೇವೆ. ವರದಿಯಾದ ಡ್ರೋನ್ ದಾಳಿಯ ರಾಜತಾಂತ್ರಿಕ ಪರಿಣಾಮವು ಮಾತುಕತೆಯಲ್ಲಿ ರಶ್ಯದ ನಿಲುವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ವರದಿಯಾದ ದಾಳಿಯು ಸಂಧಾನ ಮಾತುಕತೆಯನ್ನು ಹಳಿತಪ್ಪಿಸುವ ಉದ್ದೇಶ ಹೊಂದಿದೆ. ದಾಳಿಯು ಸಂಧಾನ ಮಾತುಕತೆಯಲ್ಲಿ ರಶ್ಯದ ನಿಲುವನ್ನು ಬದಲಾಯಿಸಬಹುದು. ರಶ್ಯದ ಸಶಸ್ತ್ರ ಪಡೆಗಳಿಂದ ಪ್ರತೀಕಾರ ದಾಳಿಗೆ ಗುರಿಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಸೋಮವಾರ ಎಚ್ಚರಿಕೆ ನೀಡಿದ್ದರು.
ಡ್ರೋನ್ ದಾಳಿ ನಡೆದಿದ್ದರೆ ಪುರಾವೆ ನೀಡಿ: ಉಕ್ರೇನ್ ಆಗ್ರಹ
ರಶ್ಯ ಅಧ್ಯಕ್ಷರ ಒಂದು ನಿವಾಸದ ಮೇಲೆ ಸೋಮವಾರ ಉಕ್ರೇನ್ನಿಂದ ಡ್ರೋನ್ ದಾಳಿ ನಡೆದಿದೆ ಎಂಬ ರಶ್ಯದ ಪ್ರತಿಪಾದನೆಯನ್ನು ಉಕ್ರೇನ್ ಮಂಗಳವಾರ ಮತ್ತೊಮ್ಮೆ ತಿರಸ್ಕರಿಸಿದ್ದು ಇಂತಹ ಘಟನೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಶಾಂತಿ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲು ರಶ್ಯ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದೆ.
ಬಹುತೇಕ ಒಂದು ದಿನ ಕಳೆದರೂ ಪುಟಿನ್ ನಿವಾಸದ ಮೇಲಿನ ಆಪಾದಿತ ದಾಳಿಯ ಆರೋಪಗಳ ಬಗ್ಗೆ ರಶ್ಯವು ಯಾವುದೇ ವಿಶ್ವಾಸಾರ್ಹ ಪುರಾವೆ ಒದಗಿಸಿಲ್ಲ. ಒದಗಿಸುವುದೂ ಇಲ್ಲ, ಯಾಕೆಂದರೆ ಇಂತಹ ದಾಳಿಯೇ ನಡೆದಿಲ್ಲ ಎಂದು ಉಕ್ರೇನ್ನ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಗಾ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಪ್ಪು ಮಾಹಿತಿ ಪ್ರಸಾರ ಮಾಡುವುದು ರಶ್ಯದ ವಿಶಿಷ್ಟ ತಂತ್ರಗಾರಿಕೆಯಾಗಿದೆ ಎಂದಿರುವ ಸಿಬಿಗಾ, ಭಾರತ, ಪಾಕಿಸ್ತಾನ, ಯುಎಇ ಸೇರಿದಂತೆ ಕೆಲವು ರಾಷ್ಟ್ರಗಳು ಆಪಾದಿತ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟಂಬರ್ನಲ್ಲಿ ರಶ್ಯದ ಕ್ಷಿಪಣಿಯು ಉಕ್ರೇನ್ನ ಸರಕಾರಿ ಕಟ್ಟಡಕ್ಕೆ ಅಪ್ಪಳಿಸಿದಾಗ ಯಾವುದೇ ರಾಷ್ಟ್ರಗಳು ಧ್ವನಿ ಎತ್ತಿರಲಿಲ್ಲ ಎಂದು ಟೀಕಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಪರಿಶೀಲಿಸದ, ಆಧಾರರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವುದನ್ನು ತಡೆಯಬೇಕು ಎಂದು ಆಂಡ್ರಿಯ್ ಸಿಬಿಗಾ ಆಗ್ರಹಿಸಿದ್ದಾರೆ.







