Tamil Nadu : ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಹುಲ್ ಗಾಂಧಿ ಉಪಸ್ಥಿತಿ

Photo: x.com/TVKpulse
ಚೆನ್ನೈ: ಕಳೆದ ನಾಲ್ಕು ದಿನಗಳಿಂದ ಹಲವು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ತಮಿಳುನಾಡಿನಲ್ಲಿ ಚಿತ್ರನಟ ಜೋಸೆಫ್ ವಿಜಯ್ ಕೊನೆಗೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆಗಳು ನಡೆದಿವೆ. ರವಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
ಅಗತ್ಯ ಸಂಖ್ಯಾಬಲವಿದೆ ಎಂಬುದನ್ನು ಖಾತರಿಪಡಿಸಲು ನಾಲ್ಕು ಬಾರಿ ರಾಜಭವನಕ್ಕೆ ಭೇಟಿ ನೀಡಿದ್ದ ವಿಜಯ್ ಅವರಿಗೆ, ಈ ತಿಂಗಳ 13ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಶಾಸಕರನ್ನು ಹೊಂದಿದ್ದು, ಸರಳ ಬಹುಮತಕ್ಕೆ 118 ಶಾಸಕರ ಅಗತ್ಯವಿದೆ. ಇದೀಗ ಕಾಂಗ್ರೆಸ್, ವಿಸಿಕೆ, ಎಡಪಕ್ಷಗಳು ಹಾಗೂ ಐಯುಎಂಎಲ್ ಬೆಂಬಲದೊಂದಿಗೆ ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ 121 ಶಾಸಕರ ಬೆಂಬಲ ದೊರೆತಂತಾಗಿದೆ.
ಯುವ ಸಮುದಾಯದ ಬೆಂಬಲದೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆಯಿಂದ ಆಯ್ಕೆಯಾದ ಶಾಸಕರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಟಿವಿಕೆ ಶಾಸಕರ ಸರಾಸರಿ ವಯಸ್ಸು 45 ಆಗಿದ್ದು, 28 ವರ್ಷದ ಅತ್ಯಂತ ಕಿರಿಯ ಶಾಸಕರೂ ಈ ಪಕ್ಷಕ್ಕೇ ಸೇರಿದ್ದಾರೆ. 41 ಶಾಸಕರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಕೇವಲ 10 ಮಂದಿ ಮಾತ್ರ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ವಿಜಯ್ ಅವರ ಎರಡನೇ ಕ್ಷೇತ್ರವನ್ನು ಹೊರತುಪಡಿಸಿದರೆ, 107 ಮಂದಿ ಟಿವಿಕೆ ಶಾಸಕರ ಪೈಕಿ ವಿಜಯ್ ಸೇರಿದಂತೆ 93 ಮಂದಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಆರು ಮಂದಿ ಶಾಸಕರು ಈ ಹಿಂದೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಸಕ್ರಿಯ ಸದಸ್ಯರಾಗಿ ಅನುಭವ ಹೊಂದಿದವರಾಗಿದ್ದಾರೆ. ಇದರಲ್ಲಿ ವಿಸಿಕೆ ಪದಾಧಿಕಾರಿ ಆಧವ್ ಅರ್ಜುನ, ಮಾಜಿ ಬಿಜೆಪಿ ಹಾಗೂ ಎಐಎಡಿಎಂಕೆ ಮುಖಂಡ ಆರ್. ನಿರ್ಮಲ್ ಕುಮಾರ್, ಮಾಜಿ ಡಿಎಂಕೆ ಸದಸ್ಯ ಆರ್.ಎಸ್. ಮುರುಗನ್ ಹಾಗೂ ಎಐಎಡಿಎಂಕೆಯ ನೀಲಗಿರೀಸ್ ಲೋಕಸಭಾ ಅಭ್ಯರ್ಥಿ ಲೋಕೇಶ್ ತಮಿಳ್ ಸೆಲ್ವನ್ ಸೇರಿದ್ದಾರೆ. ಇವರು ಮಾಜಿ ಸ್ಪೀಕರ್ ಪಿ. ಧನಪಾಲ್ ಅವರ ಪುತ್ರರಾಗಿದ್ದಾರೆ. ಕೇವಲ ಎಂಟು ಮಂದಿ ಮಾತ್ರ ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದರು.
ಚುನಾವಣಾ ಅಫಿಡವಿಟ್ ಪ್ರಕಾರ, ಟಿವಿಕೆಯ 67 ಶಾಸಕರು ಕನಿಷ್ಠ ಪದವಿ ಶಿಕ್ಷಣ ಪಡೆದಿದ್ದಾರೆ. ವಿಜಯ್ ಸೇರಿದಂತೆ 15 ಮಂದಿ 12ನೇ ತರಗತಿ ಪೂರ್ಣಗೊಳಿಸಿದ್ದರೆ, 24 ಶಾಸಕರು ಹತ್ತನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣ ಪಡೆದಿದ್ದಾರೆ. 67 ಶಾಸಕರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಉಳಿದ 40 ಮಂದಿ ಕನಿಷ್ಠ ಒಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ.






