ಶೀಘ್ರದಲ್ಲೇ ಯುರೋಪಿಯನ್ ಯೂನಿಯನ್ ಮೇಲೆ ಸುಂಕ: ಡೊನಾಲ್ಡ್ ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಕೆನಡಾ, ಮೆಕ್ಸಿಕೋ ಮತ್ತು ಚೀನಾದ ನಂತರ ತನ್ನ ಮುಂದಿನ `ಸುಂಕ'ದ ಗುರಿ ಯುರೋಪಿಯನ್ ಯೂನಿಯನ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದು ಖಂಡಿತವಾಗಿಯೂ ಅತೀ ಶೀಘ್ರದಲ್ಲಿ ಯುರೋಪಿಯನ್ ಯೂನಿಯನ್ ಮೇಲೆ ಸುಂಕ ವಿಧಿಸುವುದಾಗಿ ಹೇಳಿದ್ದಾರೆ.
`ಇದು ಖಂಡಿತವಾಗಿಯೂ ಯುರೋಪಿಯನ್ ಯೂನಿಯನ್ಗೂ ಸಂಭವಿಸುತ್ತದೆ. ಅವರು ನಮ್ಮಿಂದ ಪ್ರಯೋಜನ ಪಡೆದಿದ್ದಾರೆ ಮತ್ತು ಅವರಿಂದ ನಾವು 300 ಶತಕೋಟಿ ಡಾಲರ್ ವ್ಯಾಪಾರ ಕೊರತೆ(ದೇಶದ ಆಮದುಗಳ ವೆಚ್ಚವು ಅದರ ರಫ್ತಿನ ವೆಚ್ಚವನ್ನು ಮೀರುವುದು)ಯಲ್ಲಿದ್ದೇವೆ. ಇದಕ್ಕೆ ನಿಗದಿತ ಕಾಲಮಿತಿಯನ್ನು ನಾನು ಹೊಂದಿಲ್ಲ. ಆದರೆ ಇದು ಅತೀ ಶೀಘ್ರದಲ್ಲೇ ಸಂಭವಿಸಲಿದೆ' ಎಂದು ಟ್ರಂಪ್ ಹೇಳಿದ್ದಾರೆ.
ಅವರು ನಮ್ಮ ಕಾರುಗಳನ್ನು ತೆಗೆದುಕೊಳ್ಳುವುದಿಲ್ಲ, ನಮ್ಮ ಕೃಷಿ ಉತ್ಪನ್ನಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ನಮ್ಮಿಂದ ಬಹುತೇಕ ಏನನ್ನೂ ಪಡೆಯುವುದಿಲ್ಲ, ಆದರೆ ನಾವು ಅವರಿಂದಲೇ ಪಡೆಯುತ್ತಿದ್ದೇವೆ. ಲಕ್ಷಾಂತರ ಕಾರುಗಳು, ಭಾರೀ ಪ್ರಮಾಣದ ಆಹಾರ ಮತ್ತು ಕೃಷಿ ಉತ್ಪನ್ನಗಳು ಅವರಿಂದ ನಮ್ಮ ದೇಶಕ್ಕೆ ಆಮದಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಬ್ರಿಟನ್ ಜತೆಗಿನ ವ್ಯಾಪಾರ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸಬಹುದು ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಟ್ರಂಪ್ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಸದಸ್ಯ ದೇಶಗಳ ಮೇಲೆ ಪರಿಣಾಮ ಬೀರಬಹುದಾದ ಸುಂಕವನ್ನು ಟ್ರಂಪ್ ಜಾರಿಗೊಳಿಸಿದರೆ ದೃಢವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. `ಯುರೋಪಿಯನ್ ಯೂನಿಯನ್(ಇಯು) ಉತ್ಪನ್ನಗಳ ಮೇಲೆ ಯಾವುದೇ ಹೊಸ ಸುಂಕದ ಬಗ್ಗೆ ತಮಗೆ ತಿಳಿದಿಲ್ಲ. ಆದರೆ ಸುಂಕವು ಎಲ್ಲ ಪಕ್ಷಗಳಿಗೂ ಹಾನಿಕಾರಕ. ಇಯು ಉತ್ಪನ್ನಗಳ ಮೇಲೆ ಅನ್ಯಾಯವಾಗಿ ಮತ್ತು ಅನಿಯಂತ್ರಿತವಾಗಿ ಸುಂಕವನ್ನು ವಿಧಿಸುವ ಯಾವುದೇ ವ್ಯಾಪಾರ ಪಾಲುದಾರರ ವಿರುದ್ಧ ಇಯು ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತದೆ. ಅಮೆರಿಕದ ಕ್ರಮವು ಹೆಚ್ಚಿನ ಅಪಾಯಕ್ಕೆ ಕಾರಣವಾಗಲಿದೆ' ಎಂದು 27 ಸದಸ್ಯ ರಾಷ್ಟ್ರಗಳ ಯುರೋಪಿಯನ್ ಯೂನಿಯನ್ ಬಣದ ವಕ್ತಾರರು ಹೇಳಿದ್ದಾರೆ.







