ವಿದೇಶಗಳಲ್ಲಿ ಡೇಟಾ ಸೆಂಟರ್ ನಿರ್ಮಿಸುವ ಅಮೆರಿಕನ್ ಸಂಸ್ಥೆಗಳ ಮೇಲೆ ಭಾರಿ ತೆರಿಗೆ: ಟ್ರಂಪ್ ಬೆದರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ನ.21: ಚೀನಾದ ವಿರುದ್ಧ ಅಮೆರಿಕದ ಕೃತಕ ಬುದ್ಧಿಮತ್ತೆ (AI) ಉದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ, ದೇಶದ ಹೊರಗೆ ಡೇಟಾ ಸೆಂಟರ್ ಗಳನ್ನು ನಿರ್ಮಿಸುವ ಅಮೆರಿಕನ್ ಕಂಪೆನಿಗಳ ಮೇಲೆ 'ಭಾರಿ ತೆರಿಗೆ' ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ತಂತ್ರಜ್ಞಾನ ಸಂಸ್ಥೆಗಳು ತಮ್ಮ ಮೂಲಸೌಕರ್ಯವನ್ನು ದೇಶದೊಳಗೇ ವಿಸ್ತರಿಸುವಂತೆ ವಾಷಿಂಗ್ಟನ್ ಒತ್ತಡ ಹೇರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, 'ನಮ್ಮ ಕಂಪೆನಿಗಳು ನಮ್ಮ ದೇಶದ ಹೊರಗೆ ಡೇಟಾ ಸೆಂಟರ್ ಗಳನ್ನು ನಿರ್ಮಿಸಲು ನಾವು ಅನುಮತಿಸುವುದಿಲ್ಲ. ವಿದೇಶಗಳಲ್ಲಿ ಇಂತಹ ಸೌಲಭ್ಯಗಳನ್ನು ಸ್ಥಾಪಿಸಲು ನಿರ್ಧರಿಸುವ ಕಂಪೆನಿಗಳು ಭಾರಿ ತೆರಿಗೆಯನ್ನು ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.
ಸುಧಾರಿತ AI ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಡೇಟಾ ಸೆಂಟರ್ ಗಳ ಪ್ರಾಮುಖ್ಯತೆ ಹೆಚ್ಚುತ್ತಿರುವುದರಿಂದ, ಈ ಪ್ರಸ್ತಾವಿತ ಕ್ರಮವು ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಮತ್ತು AI ಮೂಲಸೌಕರ್ಯದ ಜಾಗತಿಕ ವಿಸ್ತರಣೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
ಮೂರನೇ ದೇಶಗಳ ಮೂಲಕ ಚೀನಾ ಸುಧಾರಿತ ಕೃತಕ ಬುದ್ಧಿಮತ್ತೆ ಚಿಪ್ ಗಳನ್ನು ಪಡೆಯುವುದನ್ನು ತಡೆಯಲು ಅಮೆರಿಕ ನಡೆಸುತ್ತಿರುವ ವ್ಯಾಪಕ ಪ್ರಯತ್ನಗಳ ನಡುವೆಯೇ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ.




