ಹದಿಹರೆಯದವರ Instagram ಚಟ: Meta ವಿರುದ್ಧ ಗಂಭೀರ ಆರೋಪ

Photo: x.com/AJEnglish
ವಾಷಿಂಗ್ಟನ್ : ಹದಿಹರೆಯದವರಲ್ಲಿ ಇನ್ಸ್ಟಾಗ್ರಾಮ್ ಚಟವಾಗಿ ಪರಿಣಮಿಸಬಹುದು ಎಂದು ಪತ್ತೆಹಚ್ಚಿದ್ದ ತನ್ನದೇ ಆಂತರಿಕ ಸಂಶೋಧನೆಯನ್ನು ಮೆಟಾ ಸಂಸ್ಥೆ ಮುಚ್ಚಿಟ್ಟಿದೆ ಎಂದು ಅಮೆರಿಕದ 29 ರಾಜ್ಯಗಳನ್ನು ಪ್ರತಿನಿಧಿಸುವ ವಕೀಲರು ಆರೋಪಿಸಿದ್ದಾರೆ. ಈ ಕುರಿತು ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಈ ಬಗ್ಗೆ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ನ ಫೆಡರಲ್ ನ್ಯಾಯಾಲಯದಲ್ಲಿ ಮೆಟಾ ವಿರುದ್ಧ ಕಾನೂನು ಮೊಕದ್ದಮೆ ದಾಖಲಾಗಿದ್ದು, ಈ ವಿಚಾರಣೆಯು ಆರರಿಂದ ಎಂಟು ವಾರಗಳ ಕಾಲ ನಡೆಯುವ ನಿರೀಕ್ಷೆಯಿದೆ.
ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನ ಕೆಲವು ವೈಶಿಷ್ಟ್ಯಗಳು ಯುವ ಬಳಕೆದಾರರ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ತಿಳಿದಿದ್ದರೂ, ಅವರನ್ನು ನಿರಂತರವಾಗಿ ತೊಡಗಿಸಿಕೊಂಡಿರುವಂತೆ ಮಾಡಲು ಮೆಟಾ ಉದ್ದೇಶಪೂರ್ವಕವಾಗಿ ಆ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಕ್ಯಾಲಿಫೋರ್ನಿಯಾದ ಡೆಪ್ಯುಟಿ ಅಟಾರ್ನಿ ಜನರಲ್ ಮೇಗನ್ ಓ ನೀಲ್ ಅವರು, "ಈ ಅಪಾಯಗಳ ಬಗ್ಗೆ ತಿಳಿದಿದ್ದರೂ ಮೆಟಾ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದೆ" ಎಂದು ಜ್ಯೂರಿಗೆ ತಿಳಿಸಿದ್ದಾರೆ. “ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮ ಎಲ್ಲರ ಜವಾಬ್ದಾರಿ. ಆದರೆ ಮೆಟಾ ತನ್ನ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ” ಎಂದು ಅವರು ವಾದಿಸಿದ್ದಾರೆ.
ಮೆಟಾ ವಿರುದ್ಧದ ತನಿಖೆಯ ವೇಳೆ ಸಂಗ್ರಹಿಸಲಾದ ಆಂತರಿಕ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಕೀಲರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಓ ನೀಲ್ ಹೇಳಿದ್ದಾರೆ.
ಒಂದು ದಾಖಲೆಯನ್ನು ಉಲ್ಲೇಖಿಸಿದ ಅವರು, ಅದರಲ್ಲಿ “ಚಿಕ್ಕ ವಯಸ್ಸಿನವರೇ ಅತ್ಯುತ್ತಮ ಬಳಕೆದಾರರು” ಎಂದು ಉಲ್ಲೇಖಿಸಲಾಗಿತ್ತು ಎಂದು ಜ್ಯೂರಿಗೆ ತಿಳಿಸಿದ್ದಾರೆ.






