United States | ವಾಯುವಿಹಾರಕ್ಕೆ ತೆರಳಿದ್ದ ತೆಲಂಗಾಣದ ವಿದ್ಯಾರ್ಥಿನಿ ಬೋಸ್ಟನ್ನಲ್ಲಿ ನಾಪತ್ತೆ; ಪತ್ತೆಗಾಗಿ ಪೋಷಕರ ಮನವಿ

ಶ್ರೀಜಾ (Photo: NDTV)
ಬೋಸ್ಟನ್ (ಅಮೆರಿಕ): ವಾಯುವಿಹಾರಕ್ಕೆಂದು ಮನೆಯಿಂದ ಹೊರಟಿದ್ದ ತೆಲಂಗಾಣ ಮೂಲದ 23 ವರ್ಷದ ವಿದ್ಯಾರ್ಥಿನಿಯೊಬ್ಬರು ಅಮೆರಿಕದ ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾರೆ. ನವೆಂಬರ್ 2ರಂದು ನಾಪತ್ತೆಯಾಗಿರುವ ಶ್ರೀಜಾ ರೆಡ್ಡಿ ಅವರ ಸುಳಿವು ಇನ್ನೂ ಪತ್ತೆಯಾಗದಿರುವುದು ಕುಟುಂಬದವರ ಆತಂಕವನ್ನು ಹೆಚ್ಚಿಸಿದೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ಕಣಗಲ್ ಮಂಡಲದ ಶಬ್ದುಲ್ಲಾಪುರಂ ಗ್ರಾಮದ ನಿವಾಸಿಯಾದ ಶ್ರೀಜಾ, ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಸುಮಾರು ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅರೆಕಾಲಿಕ ಉದ್ಯೋಗವನ್ನೂ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನವೆಂಬರ್ 2ರಂದು ವಾಯುವಿಹಾರಕ್ಕೆಂದು ತೆರಳಿದ್ದ ಅವರು ಮತ್ತೆ ಮನೆಗೆ ಮರಳಿಲ್ಲ. ಅಂದಿನಿಂದ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದೆ. ನವೆಂಬರ್ 3ರಂದು ಶ್ರೀಜಾ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ನವೆಂಬರ್ 4ರಂದು ಬೋಸ್ಟನ್ ಪೊಲೀಸರು ನಾಪತ್ತೆ ಕುರಿತು ಅಧಿಕೃತ ಎಚ್ಚರಿಕೆ ಪ್ರಕಟಿಸಿದ್ದಾರೆ. ಶ್ರೀಜಾ ಅವರನ್ನು ಪತ್ತೆಹಚ್ಚಲು ನೆರವಾಗುವಂತೆ ಸಾರ್ವಜನಿಕರಿಗೂ ಮನವಿ ಮಾಡಿದ್ದಾರೆ.
'ಶ್ರೀಜಾ ನಾಪತ್ತೆಯಾದ ದಿನದಿಂದ ಈವರೆಗೆ ಆಕೆಯಿಂದ ಯಾವುದೇ ಕರೆ ಬಂದಿಲ್ಲ. ಆಕೆ ಮನೆಗೆ ಮರಳುವುದನ್ನು ಕುಟುಂಬದ ಸದಸ್ಯರು ಆತಂಕದಿಂದ ಎದುರು ನೋಡುತ್ತಿದ್ದಾರೆ' ಎಂದು ಅವರ ತಂದೆ ಕೊಯ್ಯಾ ಯಾದಗಿರಿ ರೆಡ್ಡಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ತೆಗೆ ಸಚಿವರ ಮನವಿ:
ಈ ನಡುವೆ, ಶ್ರೀಜಾ ಅವರ ಪತ್ತೆಗಾಗಿ ತೆಲಂಗಾಣದ ಸಚಿವ ಹಾಗೂ ನಲಗೊಂಡ ಶಾಸಕ ಕೋಮಟಿ ರೆಡ್ಡಿ ವೆಂಕಟ್ ರೆಡ್ಡಿ ಅವರು ನೆರವಿನ ಕೋರಿಕೆ ಸಲ್ಲಿಸಿದ್ದಾರೆ. ಬೋಸ್ಟನ್ ನಲ್ಲಿರುವ ಭಾರತೀಯ ಪ್ರಧಾನ ದೂತಾವಾಸ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಬೋಸ್ಟನ್ ಪೊಲೀಸರ ಸಹಕಾರ ಕೋರಿದ್ದಾರೆ.
ಅಲ್ಲದೆ, ಶ್ರೀಜಾ ಅವರ ಶೋಧ ಕಾರ್ಯಾಚರಣೆಗೆ ನೆರವು ನೀಡುವಂತೆ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕಾದ (TANA) ಸದಸ್ಯರಿಗೂ ಮನವಿ ಮಾಡಿದ್ದಾರೆ.






