ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯ: ಅಮೆರಿಕ ಸಂಸತ್ತಿನ ವರದಿ

Photo Credit : NDTV
ವಾಶಿಂಗ್ಟನ್, ಮಾ.28: ಅಮೆರಿಕ ಸಂಸತ್ತಿನ ಇತ್ತೀಚಿನ ವರದಿಯು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಹಲವಾರು ಭಯೋತ್ಪಾದಕ ಗುಂಪುಗಳ ನಿರಂತರ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ.
ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನವು ವ್ಯಾಪಕ ಶ್ರೇಣಿಯ ಸಶಸ್ತ್ರ ಭಯೋತ್ಪಾದಕ ಗುಂಪುಗಳ ಕೇಂದ್ರವಾಗಿ ಉಳಿದಿದೆ. ಇದರಲ್ಲಿ ಹಲವು ಗುಂಪುಗಳು ದಶಕಗಳಿಂದಲೂ ಸಕ್ರಿಯವಾಗಿವೆ. ಸತತ ಸೇನಾ ಕಾರ್ಯಾಚರಣೆಗಳು ಮತ್ತು ನೀತಿ ಕ್ರಮಗಳು ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆಗಳೆಂದು ಗೊತ್ತುಪಡಿಸಿದ ಜಾಲವನ್ನು ಸಂಪೂರ್ಣವಾಗಿ ಕಿತ್ತುಹಾಕಿಲ್ಲ ಎಂದು ವರದಿ ಗಮನ ಸೆಳೆದಿದೆ. ಈ ಗುಂಪುಗಳನ್ನು - ಜಾಗತಿಕ, ಅಫ್ಘಾನಿಸ್ತಾನ ಕೇಂದ್ರಿತ, ಭಾರತ-ಕಾಶ್ಮೀರ ಆಧಾರಿತ, ದೇಶೀಯ ಮತ್ತು ಪಂಥೀಯ ಎಂಬ ಐದು ಭಾಗಗಳಾಗಿ ವರದಿಯಲ್ಲಿ ವರ್ಗೀಕರಿಸಲಾಗಿದೆ. ಭಾರತ ಕೇಂದ್ರಿತ ಗುಂಪುಗಳು ಸಕ್ರಿಯವಾಗಿವೆ. 2008ರ ಮುಂಬೈ ದಾಳಿಗೆ ಹೊಣೆಗಾರನಾದ ಲಷ್ಕರೆ ತೈಯಬ್ಬ ಮತ್ತು 2001ರ ಸಂಸತ್ ದಾಳಿಗೆ ಸಂಬಂಧಿಸಿರುವ ಜೈಷೆ ಮೊಹಮ್ಮದ್ ಕಾಶ್ಮೀರಕ್ಕೆ ಸಂಬಂಧಿಸಿದ ಉದ್ದೇಶಗಳೊಂದಿಗೆ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರಿಸುತ್ತಿವೆ ಎಂದು ವರದಿ ಎಚ್ಚರಿಸಿದೆ.





