ಡೊನಾಲ್ಡ್ ಟ್ರಂಪ್-ಎಲಾನ್ ಮಸ್ಕ್ ಬಹಿರಂಗ ಜಟಾಪಟಿ: ಟೆಸ್ಲಾ ಶೇರು ಮೌಲ್ಯ ದಾಖಲೆಯ ಕುಸಿತ

ವಾಷಿಂಗ್ಟನ್: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಸ್ಪರ ಬೆನ್ನಿಗೆ ನಿಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನಡುವಿನ ಭಿನ್ನಮತ ಭುಗಿಲೆದ್ದಿದ್ದು, ಪರಸ್ಪರರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಜಟಾಪಟಿಗಿಳಿದಿದ್ದಾರೆ.
ಈ ನಡುವೆ, ಎಲಾನ್ ಮಸ್ಕ್‌ರೊಂದಿಗಿನ ಸರಕಾರಿ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
2024ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಾಗೂ ಅದಕ್ಕಿಂತ ಮುಂಚಿನಿಂದಲೂ ಡೊನಾಲ್ಡ್ ಟ್ರಂಪ್ ಬೆಂಬಲಕ್ಕೆ ನಿಂತಿದ್ದ ಎಲಾನ್ ಮಸ್ಕ್, ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬಳಿಕ ಶ್ವೇತಭವನದಲ್ಲೂ ಪ್ರಮುಖ ಹುದ್ದೆ ಗಿಟ್ಟಿಸಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರ ನಡುವಿನ ಸ್ನೇಹ ಮುರಿದು ಬಿದ್ದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಬಹಿರಂಗ ಟೀಕೆಗಿಳಿದಿದ್ದಾರೆ. ಇದರ ಬೆನ್ನಿಗೇ, ಎಲಾನ್ ಮಸ್ಕ್‌ಗೆ ಆರ್ಥಿಕ ಪೆಟ್ಟು ನೀಡಲು ಮುಂದಾಗಿರುವ ಡೊನಾಲ್ಡ್ ಟ್ರಂಪ್, ಅವರೊಂದಿಗಿನ ಸರಕಾರಿ ಒಪ್ಪಂದಗಳನ್ನು ರದ್ದುಗೊಳಿಸುವ ಬೆದರಿಕೆ ಒಡ್ಡಿದ್ದಾರೆ.
ಶ್ವೇತಭವನದಲ್ಲಿ ಟ್ರಂಪ್-ಮಸ್ಕ್ ಒಟ್ಟಾಗಿ ಕಾಣಿಸಿಕೊಂಡು ಒಂದು ವಾರ ಕಳೆಯುವಷ್ಟರಲ್ಲೇ ಅವರಿಬ್ಬರ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಈ ವೇಳೆ, ಸರಕಾರಿ ಹುದ್ದೆ ವಹಿಸಿಕೊಂಡ ಕಡಿಮೆ ಅವಧಿಯಲ್ಲೇ ಎಲಾನ್ ಮಸ್ಕ್ ಉತ್ತಮ ಪಾತ್ರ ವಹಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದರು.
ಆದರೆ, ತಮ್ಮ ತೆರಿಗೆ ಕಡಿತ ಹಾಗೂ ವೆಚ್ಚ ಮಸೂದೆಯನ್ನು ಖಂಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಎಲಾನ್ ಮಸ್ಕ್ ಟೀಕಿಸುತ್ತಿದ್ದಾಗಲೂ ಡೊನಾಲ್ಡ್ ಟ್ರಂಪ್ ಮೌನ ವಹಿಸಿದ್ದರು. ಆದರೆ, ಗುರುವಾರ ಓವಲ್ ಕಚೇರಿಯಲ್ಲಿ ಈ ಕುರಿತು ತಮ್ಮ ಮೌನ ಮುರಿದಿದ್ದ ಡೊನಾಲ್ಡ್ ಟ್ರಂಪ್, ತಮ್ಮಿಬ್ಬರ ನಡುವೆ ಹಳಸಿರುವ ಸಂಬಂಧದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಎಲಾನ್ ಮಸ್ಕ್ ವರ್ತನೆಯಿಂದ ತೀರಾ ನಿರಾಶೆಗೊಂಡಿದ್ದೇನೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಕುರಿತು ಎಲಾನ್ ಮಸ್ಕ್ ಕೂಡಾ ತಕ್ಷಣವೇ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು.
ಈ ಪ್ರತಿಕ್ರಿಯೆಗೆ ಪ್ರತಿಯಾಗಿ, ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಅಂತರ್ಜಾಲ ಸೇವಾ ಸಂಸ್ಥೆ ಹಾಗೂ ಸ್ಪೇಸ್ ಎಕ್ಸ್ ರಾಕೆಟ್ ಉಡಾವಣಾ ಸಂಸ್ಥೆಯ ಆದಾಯಕ್ಕೆ ತಡೆ ಒಡ್ಡಲು ತಮ್ಮ ಸರಕಾರವನ್ನು ಬಳಸುವುದಾಗಿ ತಮ್ಮ ಸಾಮಾಜಿಕ ಮಾಧ್ಯಮ ಟ್ರೂತ್ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
"ನಮ್ಮ ಬಜೆಟ್‌ನಲ್ಲಿ ಶತಕೋಟಿ ಡಾಲರ್‌ನಷ್ಟು ಹಣ ಉಳಿಸುವ ಸುಲಭ ಮಾರ್ಗವೆಂದರೆ, ಎಲಾನ್ ಮಸ್ಕ್ ಅವರಿಗೆ ಸರಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಒಪ್ಪಂದಗಳನ್ನು ಅಂತ್ಯಗೊಳಿಸುವುದು" ಎಂದು ಅವರು ಬರೆದುಕೊಂಡಿದ್ದಾರೆ. "ಹಿಂದಿನ ಅಧ್ಯಕ್ಷ ಜೋ ಬೈಡನ್ ಅದನ್ನು ಮಾಡದಿರುವುದು ನನಗೆ ಅಚ್ಚರಿಯನ್ನುಂಟು ಮಾಡಿತ್ತು!" ಎಂದೂ ಅವರು ಸೋಜಿಗ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್‌ರ ಈ ಪೋಸ್ಟ್‌ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮತ್ತೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, "ಇದು ದಿನದಿಂದ ದಿನಕ್ಕೆ ಮತ್ತಷ್ಟು ಉತ್ತಮಗೊಳ್ಳುತ್ತಿದ್ದು, ನೀವು ಮುಂದುವರಿದು ನನ್ನ ದಿನವನ್ನಾಗಿಸಿ" ಎಂದು ಕಿಚಾಯಿಸಿದ್ದಾರೆ.
ಈ ನಡುವೆ, ಎಲಾನ್ ಮಸ್ಕ್‌ರೊಂದಿಗಿನ ಸರಕಾರಿ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ ಬೆನ್ನಿಗೇ, ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಉತ್ಪಾದನಾ ಸಂಸ್ಥೆಯ ಶೇರುಗಳ ಮೌಲ್ಯ ದಾಖಲೆಯ ಶೇ. 14ರಷ್ಟು ಕುಸಿತ ಕಂಡಿದ್ದು, ಸುಮಾರು 153 ಶತಕೋಟಿ ಡಾಲರ್‌ನಷ್ಟು ನಷ್ಟ ಅನುಭವಿಸಿವೆ.







