ಟೆಕ್ಸಾಸ್ ನಲ್ಲಿ ಪ್ರವಾಹ | ಮೃತರ ಸಂಖ್ಯೆ 80ಕ್ಕೆ ಏರಿಕೆ; 41 ಮಂದಿ ನಾಪತ್ತೆ

PC : NDTV
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗಿರುವ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 80ರ ಗಡಿ ದಾಟಿದ್ದು 41 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮೃತರಲ್ಲಿ 28 ಮಕ್ಕಳೂ ಸೇರಿದ್ದಾರೆ. ಮಳೆ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆರ್ ಕೌಂಟಿಯಲ್ಲಿ ಅತೀ ಹೆಚ್ಚು ಸಾವು-ನೋವು ಸಂಭವಿಸಿದ್ದು ಇಲ್ಲಿ 28 ಮಕ್ಕಳ ಸಹಿತ 68 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ದಕ್ಷಿಣ-ಮಧ್ಯ ಟೆಕ್ಸಾಸ್ ನಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ಗವರ್ನರ್ ಗ್ರೆಗ್ ಅಬೋಟ್ ಹೇಳಿದ್ದಾರೆ.
ನಾಪತ್ತೆಯಾದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು 17 ಹೆಲಿಕಾಪ್ಟರ್ ಗಳು, ಡ್ರೋನ್ ಗಳು, ದೋಣಿಗಳನ್ನು ಬಳಸಲಾಗಿದೆ. ಟೆಕ್ಸಾಸ್ ನಲ್ಲಿ ಜಲಾವೃತಗೊಂಡ ಪ್ರದೇಶದಲ್ಲಿದ್ದ 850ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





