ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ: ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆ

Photo credit: PTI
ಹಂಟ್: ಅಮೆರಿಕದ ಟೆಕ್ಸಾನ್ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬೃಹತ್ ಪ್ರಮಾಣದ ಆಸ್ತಿಪಾಸ್ತಿ ನಷ್ಟವುಂಟಾಗಿದೆ.
ಟೆಕ್ಸಾಸ್ ನಲ್ಲಿ ಉಂಟಾಗಿರುವ ದಿಢೀರ್ ಪ್ರವಾಹ ಪರಿಸ್ಥಿತಿಯಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಈ ಪೈಕಿ 15 ಮಂದಿ ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಈ ಪ್ರವಾಹದಿಂದಾಗಿ ಅಮೆರಿಕದ ಕೆರ್ ಕೌಂಟಿಯಲ್ಲಿ 43 ಮಂದಿ, ಟ್ರಾವಿಸ್ ಕೌಂಟಿಯಲ್ಲಿ ನಾಲ್ವರು, ಬರ್ನೆಟ್ ಕೌಂಟಿಯಲ್ಲಿ ಇಬ್ಬರು ಹಾಗೂ ಗ್ರೀನ್ ಕೌಂಟಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಪ್ರವಾಹದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ನದಿ ತೀರದ ಬೇಸಿಗೆ ಶಿಬಿರದಿಂದ ನಾಪತ್ತೆಯಾಗಿರುವ 27 ಬಾಲಕಿಯರ ಪತ್ತೆಗಾಗಿಯೂ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ಒಟ್ಟು 750 ಬಾಲಕಿಯರು ಭಾಗವಹಿಸಿದ್ದರು ಎನ್ನಲಾಗಿದೆ.
ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೂರಾರು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಈ ಭಾಗದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ (NWS) ಮುನ್ನೆಚ್ಚರಿಕೆ ನೀಡಿದೆ.