ಅಂತರಾಷ್ಟ್ರೀಯ ಮಧ್ಯಸ್ಥಿಕೆ ತಿರಸ್ಕರಿಸಿದ ಥೈಲ್ಯಾಂಡ್

Photo | X
ಬ್ಯಾಂಕಾಕ್, ಜು.25: ಕಾಂಬೋಡಿಯಾದೊಂದಿಗಿನ ಹೋರಾಟ ಕೊನೆಗೊಳಿಸಲು ತೃತೀಯ ರಾಷ್ಟ್ರದ ಮಧ್ಯಸ್ಥಿಕೆಯನ್ನು ಥೈಲ್ಯಾಂಡ್ ತಿರಸ್ಕರಿಸಿದ್ದು ಕಾಂಬೋಡಿಯಾವು ದಾಳಿಯನ್ನು ನಿಲ್ಲಿಸಬೇಕು ಮತ್ತು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಬೇಕು ಎಂದು ಸ್ಪಷ್ಟಪಡಿಸಿದೆ.
ಈ ಮಧ್ಯೆ, ಆಗ್ನೇಯ ಏಶ್ಯಾದ ನೆರೆಹೊರೆಯ ದೇಶಗಳ ನಡುವಿನ ಗಡಿವಿವಾದಕ್ಕೆ ಸಂಬಂಧಿಸಿದ ಘರ್ಷಣೆ ಶುಕ್ರವಾರ ಎರಡನೇ ದಿನವೂ ಮುಂದುವರಿದಿದ್ದು ಗಡಿಪ್ರದೇಶದ ಹಲವು ಸ್ಥಳಗಳ ಮೇಲೆ ದಾಳಿ-ಪ್ರತಿದಾಳಿ ನಡೆದಿರುವ ವರದಿಯಾಗಿದೆ. ಘರ್ಷಣೆ ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ, ಚೀನಾ ಮತ್ತು ಮಲೇಶ್ಯಾ ಹೇಳಿವೆ.
ಆದರೆ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಥೈಲ್ಯಾಂಡ್ ವಿದೇಶಾಂಗ ಇಲಾಖೆಯ ವಕ್ತಾರ ನಿಕಾನ್ರ್ಡೆಜ್ ಬಾಲಂಕುರಾ ಹೇಳಿದ್ದು ಕಾಂಬೋಡಿಯಾ ಮೊದಲು ಗಡಿಭಾಗದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಬೇಕು ಎಂದಿದ್ದಾರೆ.
ಈ ಮಧ್ಯೆ, ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆಸಬೇಕು ಎಂದು ಕಾಂಬೋಡಿಯಾ ಪ್ರಧಾನಿ ಹುನ್ ಮ್ಯಾನೆಟ್ ಆಗ್ರಹಿಸಿದ್ದು ಥೈಲ್ಯಾಂಡ್ ನ `ಅಪ್ರಚೋದಿತ ಮತ್ತು ಪೂರ್ವ ನಿಯೋಜಿತ ಮಿಲಿಟರಿ ದಾಳಿಯನ್ನು' ಖಂಡಿಸುವುದಾಗಿ ಹೇಳಿದ್ದಾರೆ.







