ಥೈಲ್ಯಾಂಡ್ ಸಂಸತ್ತು ವಿಸರ್ಜನೆ: ಮುಂದಿನ ವರ್ಷಾರಂಭದಲ್ಲಿ ಚುನಾವಣೆ

Photo Credit : AP \ PTI
ಬ್ಯಾಂಕಾಕ್, ಡಿ.12: ಥೈಲ್ಯಾಂಡ್ ಸಂಸತ್ತನ್ನು ಪ್ರಧಾನಿ ಅನುತಿನ್ ಚರ್ನ್ವಿರಾಕುಲ್ ಶುಕ್ರವಾರ ವಿಸರ್ಜಿಸುವ ಮೂಲಕ ಮುಂದಿನ ವರ್ಷಾರಂಭದಲ್ಲಿ ಸಾರ್ವತ್ರಿಕ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಥೈಲ್ಯಾಂಡ್ ಮತ್ತು ಕಂಬೋಡಿಯಾ ನಡುವಿನ ಗಡಿಭಾಗದಲ್ಲಿ ಘರ್ಷಣೆ ಮರುಕಳಿಸಿದ ಬೆನ್ನಲ್ಲೇ ಪ್ರಧಾನಿ ಅವಧಿಗೂ ಮುನ್ನವೇ ಸಂಸತ್ತನ್ನು ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ನೈತಿಕತೆ ಉಲ್ಲಂಘನೆ ಪ್ರಕರಣದಲ್ಲಿ ಪೆಟೋಂಗ್ಟರ್ನ್ ಶಿನಾವತ್ರಾ ಪ್ರಧಾನಿ ಹುದ್ದೆಯಿಂದ ವಜಾಗೊಂಡ ಬಳಿಕ ಸೆಪ್ಟಂಬರ್ ನಲ್ಲಿ ಚರ್ನುವಿರಾಕಲ್ ಪ್ರಧಾನಿಯಾಗಿ ನೇಮಕಗೊಂಡಿದ್ದರು.
` ಸರಕಾರಕ್ಕೆ ಬಹುಮತದ ಕೊರತೆ ಇರುವುದರಿಂದ ಮತ್ತು ದೇಶೀಯ ರಾಜಕೀಯ ಪರಿಸ್ಥಿತಿಗಳು ಬಹು ಸವಾಲುಗಳಿಂದ ಕೂಡಿರುವುದರಿಂದ ಸರ್ಕಾರವು ನಿರಂತರವಾಗಿ, ಸಮರ್ಥವಾಗಿ ಮತ್ತು ಸ್ಥಿರತೆಯಿಂದ ದೇಶದ ವ್ಯವಹಾರಗಳ ನಿರ್ವಹಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ . ಆದ್ದರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ವಿಸರ್ಜಿಸಿ ಹೊಸದಾಗಿ ಸಾರ್ವತ್ರಿಕ ಚುನಾವಣೆ ನಡೆಸುವುದು ಸೂಕ್ತ ಪರಿಹಾರ ಕ್ರಮವಾಗಿದೆ' ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.
ಥೈಲ್ಯಾಂಡ್ ನ ಕಾನೂನಿನಡಿ ಸಂಸತ್ತು ವಿಸರ್ಜನೆಗೊಂಡ 45ರಿಂದ 60 ದಿನಗಳೊಳಗೆ ಚುನಾವಣೆ ನಡೆಸಬೇಕು.







