ಥೈಲ್ಯಾಂಡ್ | ಮೆರವಣಿಗೆಯ ಮೇಲೆ ಟ್ರಕ್ ಚಲಾಯಿಸಿದ ಬಾಲಕ : 8 ಥಾಯ್ ಬೌದ್ಧ ಸನ್ಯಾಸಿಗಳು ಮೃತ್ಯು

Photo Credit : aljazeera.com
ಬ್ಯಾಂಕಾಕ್, ಜು.2: ಥೈಲ್ಯಾಂಡ್ನಲ್ಲಿ ಗುರುವಾರ 11 ವರ್ಷದ ಬಾಲಕನೊಬ್ಬ ತನ್ನ ಪೋಷಕರ ಪಿಕಪ್ ಟ್ರಕ್ ಅನ್ನು ಬೌದ್ಧ ಧರ್ಮದ ಮೆರವಣಿಗೆಯೊಂದರ ಮೇಲೆ ಚಲಾಯಿಸಿದ ಪರಿಣಾಮ ಎಂಟು ಮಂದಿ ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಾಲಕನನ್ನು ಬಂಧಿಸಲಾಗಿದ್ದು ರಾಜ್ಯ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಬಂದಾಗ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಾಗ 35 ಸನ್ಯಾಸಿಗಳು ಮತ್ತು ಐದು ಜನ ಅನುಯಾಯಿಗಳನ್ನೊಳಗೊಂಡ ತಂಡವು ಈಶಾನ್ಯ ಮುಕ್ದಾಹನ್ ಪ್ರಾಂತದಲ್ಲಿ ಪಾದಯಾತ್ರೆಯ ಅಂಗವಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಬಾಲಕ ಚಲಾಯಿಸಿಕೊಂಡು ಬಂದ ಪಿಕಪ್ ಟ್ರಕ್ ಪಾದಯಾತ್ರಿಗಳ ಗುಂಪಿಗೆ ನುಗ್ಗಿದೆ. ಘಟನಾ ಸ್ಥಳದಲ್ಲೇ ಐದು ಮಂದಿ ಸನ್ಯಾಸಿಗಳು ಮೃತಪಟ್ಟಿದ್ದು, ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.




