ವೀಸಾ ಮುಕ್ತ ಪ್ರವೇಶ ರದ್ದುಗೊಳಿಸುವ ಪ್ರಸ್ತಾವನೆಯಿಂದ ಹಿಂದೆ ಸರಿದ ಥೈಲ್ಯಾಂಡ್ : ಭಾರತೀಯರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿ

ಸಾಂದರ್ಭಿಕ ಚಿತ್ರ | Photo Credit : freepik
ಬ್ಯಾಂಕಾಕ್ : ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡಿದ ಕಾರಣದಿಂದ ಥೈಲ್ಯಾಂಡ್ ಸಂಪುಟವು ವೀಸಾ ಮುಕ್ತ ಪ್ರವೇಶ ರದ್ದುಗೊಳಿಸುವ ಆರಂಭಿಕ ಪ್ರಸ್ತಾವನೆಯಿಂದ ಹಿಂದೆ ಸರಿದಿದ್ದು, ಭಾರತದ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶಕ್ಕೆ ಮತ್ತೊಮ್ಮೆ ಅನುಮೋದನೆ ನೀಡಿದೆ. ಭಾರತದಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತದ ಕಾರಣದಿಂದ ಥೈಲ್ಯಾಂಡ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು TIMES OF INDIA ವರದಿ ಮಾಡಿದೆ.
ಮೇ ತಿಂಗಳಲ್ಲಿ ಥೈಲ್ಯಾಂಡ್ ಸರ್ಕಾರವು 93 ದೇಶಗಳು ಮತ್ತು ಪ್ರಾಂತ್ಯಗಳ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ಈ ಅವಕಾಶ ಕೊನೆಗೊಳ್ಳಬೇಕಿತ್ತು. ಆ ಹಳೆಯ ಪ್ರಸ್ತಾವನೆಯ ಪ್ರಕಾರ, ಥೈಲ್ಯಾಂಡ್ ಕೇವಲ 54 ದೇಶಗಳಿಗೆ ಮಾತ್ರ 30 ದಿನಗಳ ವೀಸಾ ವಿನಾಯಿತಿ ನೀಡಲು ಯೋಜಿಸಿತ್ತು. ಆದರೆ, ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಈಗ ಭಾರತೀಯರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಚೀನಾ ಮತ್ತು ಮಲೇಷ್ಯಾ ನಂತರ, ಅತೀ ಹೆಚ್ಚು ಭಾರತೀಯ ಪ್ರವಾಸಿಗರು ಪ್ರಸ್ತುತ ವರ್ಷದಲ್ಲಿ ಥೈಲ್ಯಾಂಡ್ ಗೆ ಭೇಟಿ ನೀಡಿದ್ದಾರೆ. ಮೇ ತಿಂಗಳ ರದ್ದು ನಿರ್ಧಾರಕ್ಕೂ ಮೊದಲು, ಭಾರತೀಯರಿಗೆ ವೀಸಾ ಇಲ್ಲದೆ 60 ದಿನಗಳ ಕಾಲ ಉಳಿಯಲು ಅನುಮತಿ ಇತ್ತು.
"ಥೈಲ್ಯಾಂಡ್ ಗೆ ಭಾರತದ ಪ್ರವಾಸಿಗರು ದೊಡ್ಡ ಮಾರುಕಟ್ಟೆಯಾಗಿದ್ದಾರೆ. ಅವರ ಪ್ರಯಾಣದ ಶೈಲಿಗೆ ಅನುಗುಣವಾಗಿ ಸಂಪುಟವು ಈ 30 ದಿನಗಳ ವೀಸಾ ಮುಕ್ತ ಪ್ರವೇಶಕ್ಕೆ ಅನುಮೋದನೆ ನೀಡಿದೆ. ಭವಿಷ್ಯದಲ್ಲಿ ಈ ಕ್ರಮದಿಂದ ಯಾವುದೇ ಸಮಸ್ಯೆಗಳು ಎದುರಾದರೆ, ಸರ್ಕಾರವು ಅದನ್ನು ಮರುಪರಿಶೀಲಿಸಲಿದೆ," ಎಂದು ಸಂಪುಟ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಸುರಸಕ್ ಫಾಂಚರೋಯೆನ್ವೊರಾಕುಲ್ ತಿಳಿಸಿದ್ದಾರೆ.
ಹೊಸ ವೀಸಾ ವಿನಾಯಿತಿ ಯೋಜನೆಯು ಈಗ ಎಲ್ಲಾ 27 ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
ಪ್ರವಾಸಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡು ನಿಷೇಧಿತ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ವಿದೇಶಿಗರಿಂದಾಗಿ ಸ್ಥಳೀಯ ಉದ್ಯಮಿಗಳ ಜೀವನೋಪಾಯಕ್ಕೆ ಧಕ್ಕೆ ಬರುತ್ತಿದೆ ಎಂಬ ಆತಂಕ ಎದುರಾಗಿದ್ದು, ಅದನ್ನು ಬಗೆಹರಿಸಲು ಕೂಡ ಪ್ರಧಾನಿ ಅನುತಿನ್ ಶ್ರಮಿಸುತ್ತಿದ್ದಾರೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.






