ಎಂ.ಜಾನ್ ಹ್ಯಾರಿಸನ್ ಗೆ 2026ರ ಬೂಕರ್ ಪ್ರಶಸ್ತಿ: ಜಾಗತಿಕ ಮನ್ನಣೆಗೆ ಆಯ್ಕೆಯಾದ ‘The End of Everything’’ ವೈಜ್ಞಾನಿಕ ಕಾದಂಬರಿ

ಎಂ.ಜಾನ್ ಹ್ಯಾರಿಸನ್ | Photo credit : x/@airnewsalerts
ಲಂಡನ್: ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್ ಅವರ ‘ದಿ ಎಂಡ್ ಆಫ್ ಎವೆರಿಥಿಂಗ್’ (The End of Everything) ಕಾದಂಬರಿ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭವಿಷ್ಯದಲ್ಲಿ ಸಂಭವಿಸುವ ವಿಪತ್ತು, ಅದರಿಂದ ಸಮಾಜದಲ್ಲಿ ಉಂಟಾಗುವ ಅವ್ಯವಸ್ಥೆ ಮತ್ತು ಜನರ ಬದುಕಿನ ಚಿತ್ರಣವನ್ನು ಈ ಕಾದಂಬರಿ ಹೇಳುತ್ತದೆ. ವ್ಯಂಗ್ಯಮಯ ಶೈಲಿಯಲ್ಲಿ ಬರೆಯಲಾಗಿರುವ ಕೃತಿಯು ಇಂದಿನ ಅನಿಶ್ಚಿತ ಜಗತ್ತಿನ ಪರಿಸ್ಥಿತಿಯನ್ನು ತೆರೆದಿಡುತ್ತದೆ.
50,000 ಪೌಂಡ್ ಗಳ (ಸುಮಾರು 67,000 ಡಾಲರ್) ಬಹುಮಾನ ಮೊತ್ತ ಹೊಂದಿರುವ ಬೂಕರ್ ಪ್ರಶಸ್ತಿಯನ್ನು ವೈಜ್ಞಾನಿಕ ಕಾದಂಬರಿಯೊಂದು ಗೆದ್ದಿರುವುದು ಇದೇ ಮೊದಲು. 81 ವರ್ಷದ ಹ್ಯಾರಿಸನ್ ಅವರು ಬೂಕರ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಲೇಖಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ಅವರು, ‘ಒಂದು ಕಾದಂಬರಿಯಲ್ಲಿ ಎರಡು ಮಾತ್ರವಲ್ಲ, ಮೂರು ಅಥವಾ ನಾಲ್ಕು ಸಾಹಿತ್ಯ ಪ್ರಕಾರಗಳನ್ನು ಒಟ್ಟಿಗೆ ಬಳಸಬಹುದು ಎಂಬುದನ್ನು ನನ್ನ ಪುಸ್ತಕ ಮತ್ತು ಅದಕ್ಕೆ ದೊರೆತಿರುವ ಪ್ರಶಸ್ತಿ ತೋರಿಸಿವೆ’ ಎಂದರು.
ಈ ಬಾರಿ ಅಂತಿಮ ಸುತ್ತಿನಲ್ಲಿದ್ದ ಇತರ ಐವರು ಲೇಖಕರನ್ನು ಹಿಂದಿಕ್ಕಿ ಹ್ಯಾರಿಸನ್ ಪ್ರಶಸ್ತಿ ಗೆದ್ದಿದ್ದಾರೆ. ಈ ಪೈಕಿ ಈ ಹಿಂದೆ ಬೂಕರ್ ಪ್ರಶಸ್ತಿ ಪಡೆದಿದ್ದ ಡಗ್ಲಸ್ ಸ್ಟುವರ್ಟ್ ಮತ್ತು ಮಾರ್ಲನ್ ಜೇಮ್ಸ್ ಕೂಡ ಇದ್ದರು. ಇವರಲ್ಲಿ ಒಬ್ಬರು ಪ್ರಶಸ್ತಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಪುಲಿಟ್ಜರ್ ಪ್ರಶಸ್ತಿ ವಿಜೇತೆ ಎಲಿಜಬೆತ್ ಸ್ಟ್ರೌಟ್ ಕೂಡ ಅಂತಿಮ ಸ್ಪರ್ಧಿಗಳಲ್ಲಿದ್ದರು.
ವಿಪತ್ತಿನ ಬಳಿಕದ ಜಗತ್ತಿನ ಕಥೆ
‘ದಿ ಎಂಡ್ ಆಫ್ ಎವೆರಿಥಿಂಗ್’ ಕಾದಂಬರಿಯು ಭವಿಷ್ಯದ ಇಂಗ್ಲೆಂಡ್ ನ ಕಡಲತೀರದ ಪ್ರದೇಶವೊಂದರ ಕಥಾಹಂದರವನ್ನು ಹೊಂದಿದೆ.
ಆ ಪ್ರದೇಶದಲ್ಲಿ ಸಂಭವಿಸುವ ನಿಗೂಢ ವಿಪತ್ತಿನಿಂದ ಸಮಾಜದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ. ಇದೇ ಸಂದರ್ಭದಲ್ಲಿ ನಿಗೂಢ ಅನ್ಯಗ್ರಹ ಜೀವಿಗಳು ಬ್ರಿಟನ್ ಗೆ ಬರುತ್ತವೆ.
ಕಡಲತೀರದಲ್ಲಿ ಸಿಗುವ ವಸ್ತುಗಳನ್ನು ಹುಡುಕುವ ವ್ಯಕ್ತಿಯೊಬ್ಬ ಈ ಕಾದಂಬರಿಯ ಮುಖ್ಯ ಪಾತ್ರ. ಬಂದೂಕು ಹಿಡಿದು ಓಡಾಡುವ ತನ್ನ ಅತ್ತೆಯೊಂದಿಗೆ ಆತ ವಾಸಿಸುತ್ತಿರುತ್ತಾನೆ. ಒಂದು ದಿನ ಕಡಲತೀರದಲ್ಲಿ ತನ್ನ ಆಕಾರವನ್ನು ಬದಲಾಯಿಸಿಕೊಳ್ಳಬಲ್ಲ ವಿಚಿತ್ರ ವಸ್ತುವೊಂದು ಆತನಿಗೆ ಸಿಗುತ್ತದೆ.
ಈ ಕಾದಂಬರಿಯ ಮೂಲಕ ಓದುಗರಿಗೆ ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸನ್, ‘ಇದು ಕತ್ತಲೆಯ ಜಗತ್ತು. ಮುಂದೆಯೂ ಪರಿಸ್ಥಿತಿ ಬದಲಾಗುವುದಿಲ್ಲ. ಜಗತ್ತು ವಿಚಿತ್ರವಾಗಿಯೇ ಇರುತ್ತದೆ. ಆದರೆ ಎಲ್ಲದರ ಕೊನೆಯಲ್ಲಿ ಭರವಸೆ ಸಿಗದಿದ್ದರೂ, ಸ್ವಲ್ಪ ನಿರಾಳತೆ ದೊರೆಯಬಹುದು’ ಎಂದರು.
ಕಾದಂಬರಿಯಲ್ಲಿನ ಗಂಭೀರ ಘಟನೆಗಳ ನಡುವೆ ಬರುವ ಕರಾಳ ಹಾಸ್ಯವನ್ನು ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಆದರೆ, ಕೆಲವು ಘಟನೆಗಳನ್ನು ಸ್ಪಷ್ಟವಾಗಿ ವಿವರಿಸದಿರುವುದರಿಂದ ಕಥೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಬೂಕರ್ ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಅಧ್ಯಕ್ಷೆಯಾಗಿದ್ದ ಇತಿಹಾಸಕಾರ್ತಿ ಮೇರಿ ಬಿಯರ್ಡ್ ಅವರು, ಈ ಕಾದಂಬರಿಯು ಭವಿಷ್ಯದ ಮೂಲಕ ಇಂದಿನ ರಾಜಕೀಯ ಪರಿಸ್ಥಿತಿಯನ್ನು ವಿವರಿಸುತ್ತದೆ ಎಂದರು.
‘ಒಂದು ದೊಡ್ಡ ವಿಪತ್ತು ಸಂಭವಿಸಿದಾಗ ನಿಜವಾಗಿ ಏನಾಗುತ್ತಿದೆ ಎಂಬುದೇ ಜನರಿಗೆ ಅರ್ಥವಾಗುವುದಿಲ್ಲ. ಈ ಕಾದಂಬರಿಯಲ್ಲಿ ಅದನ್ನೇ ಚಿತ್ರಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಪಾತ್ರಗಳಿಗಷ್ಟೇ ಅಲ್ಲ, ಓದುಗರಿಗೂ ಏನಾಗುತ್ತಿದೆ ಎಂಬುದು ಸ್ಪಷ್ಟವಾಗುವುದಿಲ್ಲ. ಓದುಗರನ್ನು ಕೂಡ ಪಾತ್ರಗಳ ಗೊಂದಲದ ಭಾಗವಾಗಿಸುವುದು ಈ ಕಾದಂಬರಿಯ ವಿಶೇಷ’ ಎಂದು ಅವರು ಹೇಳಿದರು.
ಹ್ಯಾರಿಸನ್ ಅವರು ‘ನ್ಯೂ ವರ್ಲ್ಡ್ಸ್’ (New Worlds) ಪತ್ರಿಕೆಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಅವರ ‘ನೋವಾ ಸ್ವಿಂಗ್’ (Nova Swing) ಕಾದಂಬರಿಗೆ ಈ ಹಿಂದೆ ಆರ್ಥರ್ ಸಿ. ಕ್ಲಾರ್ಕ್ ವಿಜ್ಞಾನ ಕಾದಂಬರಿ ಪ್ರಶಸ್ತಿ ದೊರೆತಿತ್ತು.
ವೈಜ್ಞಾನಿಕ ಕಾದಂಬರಿಗಳಲ್ಲೂ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತದೆ. ಆದರೆ, ಇಂತಹ ಕೃತಿಗಳಿಗೆ ಪ್ರಮುಖ ಸಾಹಿತ್ಯ ಪ್ರಶಸ್ತಿಗಳು ದೊರೆಯುವುದು ಅಪರೂಪ.
ಈ ಬಗ್ಗೆ ಬೂಕರ್ ಪ್ರಶಸ್ತಿ ಗೆಲ್ಲುವ ಮುನ್ನ ಮಾತನಾಡಿದ್ದ ಹ್ಯಾರಿಸನ್, ‘ಕಳೆದ 40ರಿಂದ 50 ವರ್ಷಗಳಿಂದ ಕಾದಂಬರಿಕಾರನಾಗಿ ಮತ್ತು ವಿಮರ್ಶಕನಾಗಿ ಸಾಹಿತ್ಯ ಕ್ಷೇತ್ರದಲ್ಲಿ ಈ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇನೆ. ಉತ್ತಮವಾಗಿ ಬರೆಯಲಾದ ವೈಜ್ಞಾನಿಕ ಕಾದಂಬರಿಯನ್ನು ಏಕೆ ಸಾಹಿತ್ಯಿಕ ಕಾದಂಬರಿ ಎಂದು ಪರಿಗಣಿಸಬಾರದು?’ ಎಂದು ಪ್ರಶ್ನಿಸಿದ್ದರು.
ಪ್ರಶಸ್ತಿ ಗೆದ್ದ ಬಳಿಕವೂ ಪುಸ್ತಕ ಪ್ರಕಾಶನದ ಕಾರ್ಯವೈಖರಿಯನ್ನು ಅವರು ಟೀಕಿಸಿದರು. ‘ಲೇಖಕರು ತಮ್ಮದೇ ಆದ ಶೈಲಿಯಲ್ಲಿ ಪುಸ್ತಕ ಬರೆಯುತ್ತಾರೆ. ಆದರೆ, ಪುಸ್ತಕ ಮಾರಾಟವಾಗಬೇಕು ಎಂಬ ಕಾರಣಕ್ಕೆ ಪ್ರಕಾಶಕರು ಅದನ್ನು ಯಾವುದಾದರೂ ಒಂದು ನಿರ್ದಿಷ್ಟ ಸಾಹಿತ್ಯ ಪ್ರಕಾರಕ್ಕೆ ಸೇರಿಸುತ್ತಾರೆ. ಇದರಿಂದ ಲೇಖಕರಿಗೆ ನೋವಾಗುತ್ತದೆ. ಇದು ಅವಮಾನಕರ ಸಂಗತಿಯೂ ಹೌದು’ ಎಂದರು.
ಬೂಕರ್ ಪ್ರಶಸ್ತಿಯಂತಹ ಮನ್ನಣೆಯು ಲೇಖಕರಿಗೆ ಯಾವುದೇ ನಿರ್ದಿಷ್ಟ ಹಣೆಪಟ್ಟಿಯಿಲ್ಲದೆ ತಮ್ಮದೇ ಶೈಲಿಯಲ್ಲಿ ಬರೆಯಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.
ಬೂಕರ್ ಪ್ರಶಸ್ತಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕಿ ಗ್ಯಾಬಿ ವುಡ್ ಅವರು, ಪ್ರಶಸ್ತಿಯ ಅಧಿಕೃತ ದಾಖಲೆಗಳಿಂದ ‘ಸಾಹಿತ್ಯಿಕ ಕಾದಂಬರಿ’ (Literary Fiction) ಎಂಬ ಪದವನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
‘ಎಲ್ಲ ಕಾದಂಬರಿಗಳೂ ಸಾಹಿತ್ಯ ಕೃತಿಗಳೇ ಆಗಿರುವುದರಿಂದ ಕೆಲವು ಕೃತಿಗಳನ್ನು ಮಾತ್ರ ಸಾಹಿತ್ಯಿಕ ಕಾದಂಬರಿ ಎಂದು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.
ಹ್ಯಾರಿಸನ್ ಅವರ ಗೆಲುವು, ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಅತ್ಯುತ್ತಮ ಕೃತಿಗಳು ಮೂಡಿಬರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮೇರಿ ಬಿಯರ್ಡ್ ಅಭಿಪ್ರಾಯಪಟ್ಟರು.
ಪ್ರಶಸ್ತಿ ಹಣದಿಂದ ಮನೆಯ ದುರಸ್ಥಿ!
ಬೂಕರ್ ಪ್ರಶಸ್ತಿಯೊಂದಿಗೆ ದೊರೆತ 50,000 ಪೌಂಡ್ ಗಳನ್ನು ಏನು ಮಾಡಲು ಉದ್ದೇಶಿಸಿದ್ದೀರಿ ಎಂದು ಹ್ಯಾರಿಸನ್ ಅವರನ್ನು ಕೇಳಲಾಯಿತು.
ಇದಕ್ಕೆ ಹಾಸ್ಯಭರಿತವಾಗಿ ಉತ್ತರಿಸಿದ ಅವರು, ‘ಬಹುಶಃ ಈ ಹಣವನ್ನು ಮನೆಯ ದುರಸ್ತಿ ಕೆಲಸಗಳಿಗೆ ಬಳಸಬಹುದು. ಏಕೆಂದರೆ, ಲೇಖಕನಾಗಿ ಬದುಕುವಾಗ ಮನೆಯ ದುರಸ್ತಿ ಕೆಲಸಗಳು ಯಾವಾಗಲೂ ಬಾಕಿ ಉಳಿದಿರುತ್ತವೆ!’ ಎಂದರು.






