ಲಂಡನ್‌ನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಇಂಡಿಯಾ ಕ್ಲಬ್ ಮುಚ್ಚುಗಡೆಯತ್ತ

ಲಂಡನ್: ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆ ಗಾಢವಾದ ನಂಟನ್ನು ಹೊಂದಿದ್ದ ಲಂಡನ್‌ನ ಇಂಡಿಯಾ ಕ್ಲಬ್ ಇನ್ನು ಕೆಲವು ದಿನಗಳಲ್ಲಿ ಇತಿಹಾಸದ ಪುಟಗಳಿಗೆ ಸೇರಲಿದೆ. ಕೃಷ್ಣಮೆನನ್ ಸೇರಿದಂತೆ ಭಾರತ ರಾಷ್ಟ್ರೀಯವಾದಿಗಳಿಗೆ ಕೇಂದ್ರವಾಗಿದ್ದ ಇಂಡಿಯಾ ಕ್ಲಬ್ ಮುಂದಿನ ಸೆಪ್ಟೆಂಬರ್‌ನಲ್ಲಿ ಮುಚ್ಚುಗಡೆಯಾಗಲಿದೆ. ತನ್ನ ಮುಚ್ಚುಗಡೆಯನ್ನು ವಿರೋಧಿಸಿ ಇಂಡಿಯಾ ಕ್ಲಬ್ ದೀರ್ಘಕಾಲದ ಕಾನೂನು ಹೋರಾಟವನ್ನು ನಡೆಸಿತ್ತು.
ಲಂಡನ್‌ನ ಹೃದಯಭಾಗವಾದ ಸ್ಟ್ರಾಂಡ್‌ನಲ್ಲಿರುವ ಇಂಡಿಯಾ ಕ್ಲಬ್ ಕಟ್ಟಡವು ಸ್ವಾತಂತ್ರ್ಯ ಹೋರಾಟದ ಬೆಂಬಲಿಗರ ಸಭೆ, ಸಮಾಲೋಚನೆಯ ಕೇಂದ್ರವಾಗಿತ್ತು. ಕೆಲವು ವರ್ಷಗಳ ಹಿಂದೆ ಈ ಕಟ್ಟಡವನ್ನು ನೆಲಸಮಗೊಳಿಸಲು ನೋಟಿಸ್ ಜಾರಿಗೊಳಿಸಲಾಗಿತ್ತಾದರೂ, ಅದನ್ನು ತಡೆಯುವಲ್ಲಿ ಇಂಡಿಯಾ ಕ್ಲಬ್ ಯಶಸ್ವಿಯಾಗಿತ್ತು. ಆದರೆ ಆ ಸ್ಥಳದಲ್ಲಿ ಅತ್ಯಾಧುನಿಕ ಹೊಟೇಲ್ ಒಂದನ್ನು ನಿರ್ಮಿಸುವ ಬಗ್ಗೆ ಭೂಮಾಲೀಕರು ನೋಟಿಸ್ ಜಾರಿಗೊಳಿಸಿದ್ದು, ಇಂಡಿಯಾ ಕ್ಲಬ್‌ನ ಮುಚ್ಚುಗಡೆ ಖಚಿತವಾಗಿದೆ.
ಇಂಡಿಯಾ ಕ್ಲಬ್ ಅನ್ನು ಉಳಿಸಲು ಪ್ರೊಪ್ರೈಟರ್‌ಗಳಾದ ಯಾದ್‌ಗಾರ್ ಮಾರ್ಕರ್ ಹಾಗೂ ಅವರ ಪುತ್ರಿ ಫಿರೋಝಾ ‘ಸೇವ್ ಇಂಡಿಯಾ ಕ್ಲಬ್’ ಅಭಿಯಾನವನ್ನು ನಡೆಸಿದ್ದರು. ಆದರೆ ಇದೀಗ ಅವರು ಈ ಐತಿಹಾಸಿಕ ಕಟ್ಟಡದ ಮುಚ್ಚುಗಡೆ ಅನಿವಾರ್ಯವೆಂದು ಹೇಳಿದ್ದಾರೆ.
‘‘ಇಂಡಿಯಾ ಕ್ಲಬ್‌ನ ಮುಚ್ಚುಗಡೆಯನ್ನು ನಾವು ಅತ್ಯಂತ ಭಾರವಾದ ಹೃದಯದೊಂದಿಗೆ ಘೋಷಿಸುತ್ತಿದ್ದೇವೆ. ಈ ಕಟ್ಟಡಕ್ಕೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಸೆಪ್ಟೆಂಬರ್ ೧೭ ಅಂತಿಮ ದಿನವಾಗಿರುವುದು ಎಂದು ಮಾರ್ಕರ್ ಹಾಗೂ ಫಿರೋಝಾ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕೃಷ್ಣ ಮೆನನ್ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟನ್‌ನಲ್ಲಿ ಅಭಿಯಾನ ನಡೆಸುತ್ತಿದ್ದ ಇಂಡಿಯಾ ಲೀಗ್ ಸಂಘಟನೆಯ ಸಂಸ್ಥಾಪಕ ಸದಸ್ಯರ ಜೊತೆ ಇಂಡಿಯಾ ಕ್ಲಬ್ ಗಾಢವಾದ ನಂಟನ್ನು ಹೊಂದಿತ್ತು. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಕೃಷ್ಣ ಮೆನನ್ ಅವರು ಬ್ರಿಟನ್‌ನಲ್ಲಿನ ಭಾರತದ ಪ್ರಪ್ರಥಮ ಹೈಕಮೀಶನರ್ ಆಗಿ ನೇಮಕಗೊಂಡಿದ್ದರು.