ಲೆಬನಾನ್ ಮೇಲಿನ ಇಸ್ರೇಲ್ ಆಕ್ರಮಣವನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಯುದ್ಧ ಒಪ್ಪಂದದ ಪ್ರಮುಖ ಷರತ್ತು: ಮೊಜ್ತಬಾ ಖಾಮಿನೈ

ಮೊಜ್ತಬಾ ಖಾಮಿನೈ | Photo Credit : PTI
ಟೆಹ್ರಾನ್ : “ಲೆಬನಾನ್ನ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವುದು ಮತ್ತು ಝಿಯೋನಿಸ್ಟ್ ಆಡಳಿತದ ಆಕ್ರಮಣವನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ಇರಾನ್- ಅಮೆರಿಕಾ ಶಾಂತಿ ಒಪ್ಪಂದದ ಪ್ರಮುಖ ಷರತ್ತು" ಎಂದು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಹೇಳಿದ್ದಾರೆ.
ಹಿಝ್ಬುಲ್ಲಾ ಸೆಕ್ರೆಟರಿ-ಜನರಲ್ ನಯೀಮ್ ಖಾಸಿಮ್ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಮೊಜ್ತಬಾ ಖಾಮಿನೈ, 14 ಅಂಶಗಳ ಈ ಒಪ್ಪಂದವು ಲೆಬನಾನ್ ಮೇಲಿನ ಎಲ್ಲಾ ಇಸ್ರೇಲ್ ಆಕ್ರಮಣಗಳನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಸ್ಪಷ್ಟವಾಗಿ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.
ಹಿಝ್ಬುಲ್ಲಾವನ್ನು ಅಲುಗಾಡಿಸಲಾಗದ ಬಂಡೆ ಎಂದು ಬಣ್ಣಿಸಿದ ಮೊಜ್ತಬಾ ಖಾಮಿನೈ, ಝಿಯೋನಿಸ್ಟ್ ಆಡಳಿತ ಮತ್ತು ಅದರ ಬೆಂಬಲಿಗರ ಕ್ರೂರ ದಾಳಿಯ ವಿರುದ್ಧ ಹಿಝ್ಬುಲ್ಲಾ ತೋರಿದ ದೃಢ ಹೋರಾಟ, ಜಾಗತಿಕ ಪ್ರಾಬಲ್ಯ ಮತ್ತು ಅದರ ಕೈಗೊಂಬೆಗಳಿಂದ ಮುಕ್ತಿಯನ್ನು ಬಯಸುವ ಸ್ವತಂತ್ರ ರಾಷ್ಟ್ರಗಳಿಗೆ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದೆ ಎಂದು ಹೇಳಿದ್ದಾರೆ.
ಈ ಮಹತ್ತರ ಸಾಧನೆಯ ಬಹುದೊಡ್ಡ ಪಾಲು ಲೆಬನಾನ್ ಜನತೆ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾಗದ ಜನರ ತಾಳ್ಮೆ, ಉದಾತ್ತತೆ, ತ್ಯಾಗ ಮತ್ತು ಒಗ್ಗಟ್ಟಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ದಿವಂಗತ ಕ್ರಾಂತಿಯ ನಾಯಕ, ಹುತಾತ್ಮ ಇಮಾಮ್ ಸಯ್ಯದ್ ಅಲಿ ಖಾಮಿನೈ ಅವರು ತೋರಿಸಿಕೊಟ್ಟ ಮಾರ್ಗವನ್ನು ಅನುಸರಿಸುತ್ತಾ, ಈ ಶೋಷಿತರೂ ಆದರೆ ಶಕ್ತಿಶಾಲಿಗಳೂ ಆದ ಹೋರಾಟಗಾರರನ್ನು ರಕ್ಷಿಸುವುದನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ತನ್ನ ಕಾರ್ಯತಂತ್ರದ ನೀತಿಯನ್ನಾಗಿ ಮಾಡಿಕೊಂಡಿದೆ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ , ದಿವಂಗತ ಹಿಝ್ಬುಲ್ಲಾ ನಾಯಕ ಸಯ್ಯಿದ್ ಹಸನ್ ನಸ್ರಲ್ಲಾರನ್ನು ಸ್ಮರಿಸಿದ ಮೊಜ್ತಬಾ ಖಾಮಿನೈ , ಪ್ರತಿರೋಧ ಚಳವಳಿಯ ಇತರ ಹುತಾತ್ಮ ಕಮಾಂಡರ್ಗಳು ಹಾಗೂ ಸಂಘರ್ಷದ ವೇಳೆ ಮೃತಪಟ್ಟ ಮತ್ತು ಗಾಯಗೊಂಡ ಎಲ್ಲರಿಗೂ ಗೌರವ ಸಲ್ಲಿಸಿದರು. ಪ್ರತಿರೋಧ ಚಳುವಳಿ, ಅದರ ಹೋರಾಟಗಾರರು, ಯೋಧರು ಮತ್ತು ಸ್ಥಳಾಂತರಗೊಂಡ ಕುಟುಂಬಗಳಿಗೆ ದೇವರ ಬೆಂಬಲ ನಿರಂತರವಾಗಿ ದೊರೆಯಲಿದೆ” ಎಂದು ಹಾರೈಸಿದ್ದಾರೆ.
ಈ ಹಿಂದೆ ಇರಾನ್ ಸುಪ್ರೀಂ ನಾಯಕ ಮೊಜ್ತಬಾರಿಗೆ ಹಿಝ್ಬುಲ್ಲಾ ಪತ್ರ ಬರೆದಿತ್ತು. ಪತ್ರದಲ್ಲಿ ಆಯತೊಲ್ಲಾ ಸಯ್ಯಿದ್ ಅಲಿ ಖಾಮಿನೈ ಅವರ ಹುತಾತ್ಮತೆಗೆ ಸಂತಾಪ ವ್ಯಕ್ತಪಡಿಸಿತ್ತು.
“ಭೂಮಿಯ ಫರೋಹರ ವಿರುದ್ಧ ಕರ್ಬಲಾ ಮಾದರಿಯ ಹೋರಾಟವನ್ನು ಪೂರ್ಣ ಶಕ್ತಿ ಮತ್ತು ದೃಢತೆಯಿಂದ ನಡೆಸುತ್ತಿರುವ ಈ ಯುದ್ಧಭೂಮಿಯಿದಿಂದಲೇ ನಾವು ನಿಮಗೆ ನಮ್ಮ ನಿಷ್ಠೆಯ ಹಸ್ತವನ್ನು ಚಾಚುತ್ತೇವೆ” ಎಂದು ಹೇಳಿದ ಹಿಝ್ಬುಲ್ಲಾ , ತಮ್ಮ ಮುಖ್ಯಸ್ಥರು ಮತ್ತು ಹೋರಾಟಗಾರರು ಹುತಾತ್ಮ ಆಯತೊಲ್ಲಾ ಖಾಮಿನೈ ಅವರ ಮಾರ್ಗವನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿತ್ತು.
ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಯುದ್ಧ ಆರಂಭಿಸಿತ್ತು. ಯುದ್ಧದ ಮೊದಲ ದಿನವೇ ಆಯತೊಲ್ಲಾ ಸಯ್ಯಿದ್ ಅಲಿ ಖಾಮಿನೈ ಅವರು ತಮ್ಮ ಕುಟುಂಬದ ಹಲವು ಸದಸ್ಯರು ಮತ್ತು ಸೇನಾ ಕಮಾಂಡರ್ಗಳೊಂದಿಗೆ ಹತ್ಯೆಗೀಡಾದರು. ಈ ಸಂಘರ್ಷದಲ್ಲಿ ಇರಾನ್ನಲ್ಲಿ ಸಾವಿರಾರು ಜನರು, ಅವರಲ್ಲಿ ಅನೇಕರು ನಾಗರಿಕರು, ಮೃತಪಟ್ಟಿದ್ದರು. ಏಪ್ರಿಲ್ 8ರಂದು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮದ ಬಳಿಕ ಸಂಘರ್ಷ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ಪ್ರಬಲ ಪ್ರತಿಕಾರದ ದಾಳಿಯ ಬಳಿಕ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ಒಪ್ಪಿಕೊಂಡರು. ಜೂನ್ 17ರಂದು ಸಹಿ ಮಾಡಲಾದ 14 ಅಂಶಗಳ ತಿಳುವಳಿಕೆ ಒಪ್ಪಂದವು ಕದನ ವಿರಾಮವನ್ನು ಬಲಪಡಿಸುವ ಉದ್ದೇಶ ಹೊಂದಿತ್ತು. ಆದರೆ, ಕದನ ವಿರಾಮವನ್ನು ಉಲ್ಲಂಘಿಸಿ ಕಳೆದ ಎರಡು ವಾರಗಳಲ್ಲಿ ಅಮೆರಿಕ ಇರಾನ್ ವಿರುದ್ಧ ದಾಳಿಗಳನ್ನು ನಡೆಸಿದೆ.






