ಹದಿಹರೆಯದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವಿಶ್ವದ ಹಿರಿಯಜ್ಜಿ!

PC: x.com/ndtv
ಬ್ರಿಟನ್ : ಕೆಲ ತಿಂಗಳ ಹಿಂದೆ ವಿಶ್ವದ ಹಿರಿಯಜ್ಜಿ ಎನಿಸಿಕೊಂಡ ಎಥೆಲ್ ಕೆಥರಾಮ್ ಗುರುವಾರ (ಆಗಸ್ಟ್ 21) 116ನೇ ಹುಟ್ಟುಹಬ್ಬ ಆಚರಿಸಿಕೊಂಡರು. 116 ವರ್ಷ ವಯಸ್ಸಿನ ಬ್ರೆಝಿಲ್ ಕ್ರೈಸ್ತಧರ್ಮ ಪ್ರಚಾರಕಿ ಮೃತಪಟ್ಟ ಬಳಿಕ ಎಥೆಲ್ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದರು. ಲೈಟ್ ವಾಟರ್ ಸರ್ರೆಯಲ್ಲಿರುವ ಆರೈಕೆ ಗೃಹದಲ್ಲಿ ವಾಸವಿರುವ ಎಥೆಲ್ ಹುಟ್ಟಿದ್ದು 1909ರ ಆಗಸ್ಟ್ 21ರಂದು. ಎಥೆಲ್ ಕುಟುಂಬ ಸದಸ್ಯರ ಜತೆ ಸದ್ದುಗದ್ದಲವಿಲ್ಲದೇ 116ನೇ ಹುಟ್ಟುಹಬ್ಬ ಆಚರಿಸಿಕೊಂಡರು ಎಂದು ಹಾಲ್ ಮಾರ್ಕ್ ಆರೈಕೆಗೃಹದ ಪ್ರಕಟಣೆ ಹೇಳಿದೆ.
ಎಥೆಲ್ ಅವರ 116ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಂದ ಎಲ್ಲ ಬಗೆಯ ಸಂದೇಶಗಳು ಹಾಗೂ ಅವರ ಬಗ್ಗೆ ತೋರಿಸಿದ ಆಸಕ್ತಿಗೆ ಅವರು ಹಾಗೂ ಕುಟುಂಬದವರು ಕೃತಜ್ಞರು ಎಂದು ಪ್ರಕಟಣೆ ಹೇಳಿದೆ. ಯಾರ ಜತೆಗೂ ಮಾತನಾಡಲು ಅವರು ಇಷ್ಟಪಡುವುದಿಲ್ಲ. ಆದರೆ ರಾಜ 3 ನೇಚಾರ್ಲ್ಸ್ ಮಾತನಾಡುವುದಾದರೆ ಅದಕ್ಕೆ ಸಿದ್ಧ ಎಂದು ಸ್ಪಷ್ಟಪಡಿಸಲಾಗಿದೆ.
ಬ್ರಿಟಿಷ್ ರಾಜಾಡಳಿತ ವಿಭಾಗವು 100ನೇ ಜನ್ಮದಿನ ಆಚರಿಸಿಕೊಳ್ಳುವ ಎಲ್ಲರಿಗೂ ಶುಭ ಹಾರೈಸುತ್ತದೆ. ಕಳೆದ ವರ್ಷ 115ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರಾಜ 3 ನೇಚಾರ್ಲ್ಸ್ "ಇದೊಂದು ಐತಿಹಾಸಿಕ ಮೈಲುಗಲ್ಲು" ಎಂದು ಶುಭ ಹಾರೈಸಿದ್ದರು.
ಟೈಟಾನಿಕ್ ದುರಂತಕ್ಕೆ ಮೂರು ವರ್ಷ ಮೊದಲು ಜನಿಸಿದ ಎಥೆಲ್, ಮೂವರು ಮೊಮ್ಮಕ್ಕಳು ಮತ್ತು ಐವರು ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ. 18ನೇ ವಯಸ್ಸಿನಲ್ಲಿ ಮಿಲಿಟರಿ ಕುಟುಂಬವೊಂದಕ್ಕೆ ಸಹಾಯಕಿಯಾಗಿ ಭಾರತಕ್ಕೆ ಆಗಮಿಸಿದ್ದರು. ಹಡಗಿನ ಮೂಲಕ ಒಬ್ಬಂಟಿಯಾಗಿ ಮೂರು ವಾರಗಳ ಪ್ರವಾಸ ಕೈಗೊಂಡಿದ್ದರು.
ಬ್ರಿಟನ್ ಗೆ ಮರಳಿದ ಬಳಿಕ ಭೋಜನ ಕೂಟವೊಂದರಲ್ಲಿ ಭಾವಿ ಪತಿ ನೋರ್ಮನ್ ಕೆಥರ್ ಹ್ಯಾಮ್ ಅವರನ್ನು ಭೇಟಿಯಾಗಿದ್ದರು. 1933ರಲ್ಲಿ ವಿವಾಹವಾದ ಬಳಿಕ ದಕ್ಷಿಣ ಇಂಗ್ಲೆಂಡ್ ಗೆ ವಾಪಸ್ಸಾಗುವ ಮುನ್ನ ದಂಪತಿ ಹಾಂಕಾಂಗ್ ಮತ್ತು ಗಿಬ್ರಾಲ್ಟರ್ ನಲ್ಲಿ ವಾಸವಿದ್ದರು. 1976ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ಪತಿ ಮೃತಪಟ್ಟಿದ್ದರು.







