ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯಕ್ಕೆ ವಿಶ್ವಾಸಾರ್ಹ ಪುರಾವೆಯಿದೆ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್

ಆ್ಯಂಟೊನಿಯ್ ಗುಟೆರಸ್ | PTI
ವಿಶ್ವಸಂಸ್ಥೆ, ಆ.13: ಬಂಧಿತ ಫೆಲೆಸ್ತೀನೀಯರ ವಿರುದ್ಧ ಇಸ್ರೇಲಿ ಪಡೆಗಳ ಲೈಂಗಿಕ ದೌರ್ಜನ್ಯ ಹಾಗೂ ಇತರ ಉಲ್ಲಂಘನೆಗಳ ವಿಶ್ವಾಸಾರ್ಹ ಪುರಾವೆಯಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಹಲವು ಜೈಲುಗಳಲ್ಲಿ, ಬಂಧನ ಕೇಂದ್ರಗಳಲ್ಲಿ ಹಾಗೂ ಮಿಲಿಟರಿ ನೆಲೆಯಲ್ಲಿ ಇಸ್ರೇಲಿ ಮಿಲಿಟರಿ ಹಾಗೂ ಭದ್ರತಾ ಪಡೆಗಳಿಂದ ಫೆಲೆಸ್ತೀನೀಯರ ವಿರುದ್ಧ ವರದಿಯಾದ ಉಲ್ಲಂಘನೆಗಳ ಬಗ್ಗೆ ತೀವ್ರ ಕಳವಳ ಹೊಂದಿರುವುದಾಗಿ ಗುಟೆರಸ್ ಹೇಳಿದ್ದಾರೆ. ` ಕೆಲವು ರೀತಿಯ ಲೈಂಗಿಕ ದೌರ್ಜನ್ಯಗಳನ್ನು ವಿಶ್ವಸಂಸ್ಥೆ ಸತತವಾಗಿ ದಾಖಲಿಸಿಕೊಂಡಿರುವುದರಿಂದ `ಸಂಘರ್ಷದ ಸಂದರ್ಭ ಲೈಂಗಿಕ ದೌರ್ಜನ್ಯ' ಕುರಿತ ತನ್ನ ಮುಂದಿನ ವರದಿಯಲ್ಲಿ ಇಸ್ರೇಲಿ ಪಡೆಗಳನ್ನು `ಅಪರಾಧಿಗಳೆಂದು' ಪಟ್ಟಿ ಮಾಡಬಹುದು ಎಂದು ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ವಿಶ್ವಸಂಸ್ಥೆಯ ವೀಕ್ಷಕರಿಗೆ ಪ್ರವೇಶವನ್ನು ನಿರಾಕರಿಸಿರುವುದರಿಂದ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯದ ವ್ಯವಸ್ಥಿತ ಬಳಕೆ, ಮಾದರಿ ಹಾಗೂ ಪ್ರವೃತ್ತಿಗಳ ಬಗ್ಗೆ ಖಚಿತವಾದ ನಿರ್ಣಯವನ್ನು ಮಾಡುವುದು ಸವಾಲಿನ ಕೆಲಸವಾಗಿದೆ. ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯ ಕೃತ್ಯಗಳನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ನಿರ್ದಿಷ್ಟ ಕಾಲಮಿತಿಯ ಬದ್ಧತೆಗಳನ್ನು ಕಾರ್ಯಗತಗೊಳಿಸಬೇಕು. ವಿಶ್ವಾಸಾರ್ಹ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ಲೈಂಗಿಕ ದೌರ್ಜನ್ಯವನ್ನು ನಿಷೇಧಿಸುವ ಸ್ಪಷ್ಟ ಆದೇಶ, ಮಿಲಿಟರಿ ಮತ್ತು ಭದ್ರತಾ ಪಡೆಗಳಿಗೆ ನೀತಿ ಸಂಹಿತೆ ಜಾರಿಗೊಳಿಸಬೇಕು ಮತ್ತು ವಿಶ್ವಸಂಸ್ಥೆಯ ವೀಕ್ಷಕರಿಗೆ ಅಡೆತಡೆಯಿಲ್ಲದ ಪ್ರವೇಶಾವಕಾಶ ಕಲ್ಪಿಸಬೇಕು' ಎಂದವರು ಇಸ್ರೇಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ಇಸ್ರೇಲ್ ಪಡೆಗಳು ಲೈಂಗಿಕ ದೌರ್ಜನ್ಯ ಮತ್ತು ಲಿಂಗಾಧಾರಿತ ದೌರ್ಜನ್ಯಗಳನ್ನು ವ್ಯವಸ್ಥಿತವಾಗಿ ಬಳಸುತ್ತಿವೆ ಎಂದು ವಿಶ್ವಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ ತಜ್ಞರು ಕಳೆದ ಮಾರ್ಚ್ನಲ್ಲಿ ಆರೋಪಿಸಿದ್ದರು.
► ಆಧಾರರಹಿತ ಆರೋಪ: ಇಸ್ರೇಲ್
ಇದನ್ನು ಆಧಾರರಹಿತ ಮತ್ತು ಪಕ್ಷಪಾತದ ಆರೋಪ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಡ್ಯಾನಿ ಡೆನಾನ್ ತಳ್ಳಿಹಾಕಿದ್ದಾರೆ. ಹಮಾಸ್ ನಡೆಸುವ ಆಘಾತಕಾರಿ ಯುದ್ಧಾಪರಾಧ ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ, ಎಲ್ಲಾ ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ವಿಶ್ವಸಂಸ್ಥೆ ಗಮನ ಕೇಂದ್ರೀಕರಿಸಬೇಕು. ಇಸ್ರೇಲ್ ತನ್ನ ಪ್ರಜೆಗಳನ್ನು ರಕ್ಷಿಸುವುದರಿಂದ ದೂರ ಸರಿಯುವುದಿಲ್ಲ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದವರು ಹೇಳಿದ್ದಾರೆ.







