ʼಟ್ರಂಪ್ ಘೋಷಣೆʼ ಇನ್ನಷ್ಟು ಸೋಲನ್ನು ಮಾತ್ರ ತರುತ್ತದೆ: ಟ್ರಂಪ್ ಎಚ್ಚರಿಕೆಗೆ ಇರಾನ್ ತಿರುಗೇಟು

Photo Credit : aljazeera.com
ಟೆಹರಾನ್, ಆ. 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಘೋಷಿಸಿರುವ ಆರ್ಥಿಕ ನಿರ್ಬಂಧಗಳ ಅಭಿಯಾನವನ್ನು ಇರಾನ್ ತಳ್ಳಿಹಾಕಿದ್ದು, ಇದನ್ನು ಅಮೆರಿಕದ ಸ್ವಂತ ಬಿಕ್ಕಟ್ಟಿನಿಂದ ಗಮನ ತಿರುಗಿಸುವ ತಂತ್ರ ಎಂದು ಕರೆದಿದೆ. ವಿಫಲ ನೀತಿಗಳನ್ನು ಮತ್ತೆ ಮುಂದುವರಿಸುವುದು ಅಮೆರಿಕಕ್ಕೆ ಇನ್ನಷ್ಟು ಸೋಲನ್ನು ಮಾತ್ರ ತರುತ್ತದೆ ಎಂದು ಎಚ್ಚರಿಸಿದೆ.
‘ಆರ್ಥಿಕ ಡಿ-ಡೇ’ ಎಂದು ಕರೆಯಲ್ಪಡುವ ಇದು ಅಮೆರಿಕದ ಸ್ವಂತ ಬಿಕ್ಕಟ್ಟಿನಿಂದ ಗಮನ ತಿರುಗಿಸುವ ತಂತ್ರವಾಗಿದೆ. ಇದು ಅಭೂತಪೂರ್ವ ಸಾಲ ಮತ್ತು ಏರುತ್ತಿರುವ ಬಡ್ಡಿದರದ ವೆಚ್ಚದ ಫಲಿತಾಂಶ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷರ ಇತ್ತೀಚಿನ ಘೋಷಣೆಯನ್ನು ‘ಆರ್ಥಿಕ ಭಯೋತ್ಪಾದನೆ’ ಎಂದು ಕರೆದಿರುವ ಅರಾಘ್ಚಿ, ವಿಫಲ ನೀತಿಗಳನ್ನು ಮತ್ತೆ ಪಟ್ಟುಹಿಡಿದು ಮುಂದುವರಿಸುವುದು ಇನ್ನಷ್ಟು ಸೋಲು ಮತ್ತು ಇರಾನಿಯನ್ನರ ಹಗೆತನವನ್ನು ಮಾತ್ರ ತರುತ್ತದೆ. ಅಮೆರಿಕದ ಆರ್ಥಿಕ ಭಯೋತ್ಪಾದನೆಯು ಜಾಗತಿಕ ಅರ್ಥವ್ಯವಸ್ಥೆ ಮತ್ತು ಪ್ರಪಂಚದಾದ್ಯಂತದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುತ್ತದೆ ಎಂದು ಹೇಳಿದ್ದಾರೆ.




