ʼಜೆನ್ ಝೀʼ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ಹುತಾತ್ಮರು ಎಂದು ಘೋಷಿಸಲಾಗುವುದು: ನೇಪಾಳದ ನೂತನ ಪ್ರಧಾನಿ

ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿ (Photo: PTI)
ಕಠ್ಮಂಡು: ನೇಪಾಳ ಸರಕಾರ ವಿರೋಧಿ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ಹುತಾತ್ಮರು ಎಂದು ಘೋಷಿಸಲಾಗುವುದು ಎಂದು ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿ ಹೇಳಿದ್ದಾರೆ.
ಕೆ.ಪಿ.ಓಲಿ ಶರ್ಮಾ ಸರಕಾರವನ್ನು ಜೆನ್ ಝೀ ಪ್ರತಿಭಟನೆ ಪದಚ್ಯುತಗೊಳಿಸಿದ ನಂತರ, ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, ಪ್ರಥಮ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಸುಶೀಲಾ ಕರ್ಕಿ, ನಮ್ಮ ತಂಡವು ಜನರಿಗೆ ಸೇವೆ ಮಾಡಲು ಅಧಿಕಾರ ಸ್ವೀಕರಿಸಿದೆಯೆ ಹೊರತು, ಅಧಿಕಾರವನ್ನು ವಶಪಡಿಸಿಕೊಳ್ಳಲು ಅಲ್ಲ. ದೇಶವನ್ನು ಮರುನಿರ್ಮಾಣ ಮಾಡಲು ಸಾಮೂಹಿಕ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ನೇಪಾಳದ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶೆಯಾದ 73 ವರ್ಷದ ಸುಶೀಲಾ ಕರ್ಕಿ, ನಾನು ಆರು ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲುಳಿಯುವುದಿಲ್ಲ ಹಾಗೂ ಅಧಿಕಾರವನ್ನು ನೂತನವಾಗಿ ಚುನಾಯಿತಗೊಳ್ಳುವ ಸರಕಾರಕ್ಕೆ ಹಸ್ತಾಂತರಿಸುತ್ತೇನೆ ಎಂದು ಘೋಷಿಸಿದ್ದಾರೆ. ಅವರಿಂದ ಸಚಿವ ಸಂಪುಟವನ್ನು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.
“ನಾನು ಹಾಗೂ ನನ್ನ ತಂಡ ಅಧಿಕಾರದ ರುಚಿಯನ್ನು ಅನುಭವಿಸಲು ಬಂದಿಲ್ಲ. ನಾವು ಆರು ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲುಳಿಯುವುದಿಲ್ಲ. ನಾನು ನೂತನ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಿದ್ದೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ” ಎಂದು ಜನತೆಯನ್ನುದ್ದೇಶಿಸಿ ಸುಶೀಲಾ ಕರ್ಕಿ ಮನವಿ ಮಾಡಿದ್ದಾರೆ.







