ಅಮೆರಿಕ: ಟ್ರಂಪ್ ನೀತಿಗಳನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ
ಟ್ರಂಪ್ ದೋಷಾರೋಪಣೆಗೆ ಪ್ರತಿಭಟನಾಕಾರರ ಆಗ್ರಹ

Photo source: Reuters
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕಠಿಣ ನೀತಿಗಳನ್ನು ವಿರೋಧಿಸಿ ಅಮೆರಿಕದ ನ್ಯೂಯಾರ್ಕ್, ವಾಷಿಂಗ್ಟನ್, ಸ್ಯಾನ್ಫ್ರಾನ್ಸಿಸ್ಕೋ, ಬೋಸ್ಟನ್ ಹಾಗೂ ಇತರ ಪ್ರಮುಖ ನಗರಗಳಾದ್ಯಂತ ಶನಿವಾರ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಸ್ಯಾನ್ಫ್ರಾನ್ಸಿಸ್ಕೋದ ಬೀಚ್ನಲ್ಲಿ ಪ್ರತಿಭಟನೆ ನಡೆಸಿದ ಜನರ ಗುಂಪು ಮರಳಿನ ಮೇಲೆ `ದೋಷಾರೋಪಣೆಗೆ ಒಳಪಡಿಸಿ ವಜಾಗೊಳಿಸಿ' ಎಂಬ ಘೋಷಣೆ ಬರೆದರು.
ನ್ಯೂಯರ್ಕ್ ನ ಪ್ರಧಾನ ಗ್ರಂಥಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಅಧ್ಯಕ್ಷ ಟ್ರಂಪ್ ಅವರ ನೀತಿಗಳನ್ನು ಖಂಡಿಸಲಾಗಿದ್ದು `ಅಮೆರಿಕದಲ್ಲಿ ಯಾವುದೇ ರಾಜರಿಲ್ಲ', ದಬ್ಬಾಳಿಕೆಯನ್ನು ವಿರೋಧಿಸಿ, ವಲಸಿಗರಿಗೆ ಅಮೆರಿಕದಲ್ಲಿ ಸ್ವಾಗತ ' ಇತ್ಯಾದಿ ಘೋಷಣೆಗಳನ್ನು ಕೂಗಿದರು.
ವಾಷಿಂಗ್ಟನ್ ನಲ್ಲಿ ಗುಂಪು ಸೇರಿದ ಪ್ರತಿಭಟನಾಕಾರರು ` ಟ್ರಂಪ್ ಅವರು ದೀರ್ಘಾವಧಿಯಿಂದ ಚಾಲ್ತಿಯಲ್ಲಿರುವ ಸಾಂವಿಧಾನಿಕ ಮಾನದಂಡಗಳಿಗೆ ಬೆದರಿಕೆ ಒಡ್ಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿ ವ್ಯಕ್ತಿಗಳ ಕಾನೂನು ಹಕ್ಕನ್ನು ಗೌರವಿಸುವಂತೆ ಟ್ರಂಪ್ ಆಡಳಿತವನ್ನು ಆಗ್ರಹಿಸಿದರು.
ದಾಖಲೆ ರಹಿತ ವಲಸಿಗರನ್ನು ಗಡೀಪಾರು ಮಾಡುವ ಟ್ರಂಪ್ ಕ್ರಮವನ್ನು ಪ್ರತಿಭಟನಾಕಾರರು ವಿರೋಧಿಸಿದರು. ಅಮೆರಿಕದಲ್ಲಿ ವಾಸಿಸುವ ಜನರನ್ನು ಸರಕಾರ ನಿಂದಿಸಬಾರದು ಎಂಬ ನಿಯಮ ಹಾಗೂ ಪರಿಕಲ್ಪನೆಯ ಮೇಲೆ ಟ್ರಂಪ್ ಆಡಳಿತ ನೇರ ಪ್ರಹಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಟೆಕ್ಸಾಸ್ ನ ಕರಾವಳಿ ನಗರ ಗಾಲ್ವೆಸ್ಟನ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತಿತರ ಕಡೆ ಅಮೆರಿಕದ ಧ್ವಜವನ್ನು ತಲೆಕೆಳಗಾಗಿ ಹಿಡಿದು ಪ್ರತಿಭಟನೆ ನಡೆಸಲಾಗಿದೆ.
ಸುಮಾರು 400 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿರುವುದಾಗಿ ಪ್ರತಿಭಟನೆಯ ಆಯೋಜಕರಾಗಿರುವ `ಗ್ರೂಪ್ 50501' (50 ರಾಜ್ಯಗಳಲ್ಲಿ 50 ಪ್ರತಿಭಟನೆ ಮತ್ತು 1 ಅಭಿಯಾನ ಎಂಬ ಪರಿಕಲ್ಪನೆ) ಮಾಹಿತಿ ನೀಡಿದೆ. ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಗಳು, ಬಜೆಟ್ ಕಡಿತ, ವಿವಿಗಳು, ಮಾಧ್ಯಮಗಳು ಹಾಗೂ ಕಾನೂನು ಸಂಸ್ಥೆಗಳ ಮೇಲಿನ ಒತ್ತಡದ ವಿರುದ್ಧದ ಜನಾಕ್ರೋಶವನ್ನು ದೀರ್ಘಾವಧಿಯ ಅಭಿಯಾನವನ್ನಾಗಿ ಪರಿವರ್ತಿಸಲು `ಗ್ರೂಫ್ 50501' ಬಯಸಿದೆ.
ವಲಸಿಗರ ಗಡೀಪಾರು, ಗಾಝಾದಲ್ಲಿನ ಯುದ್ಧದಲ್ಲಿ ಇಸ್ರೇಲ್ಗೆ ಬೆಂಬಲ, ಸರ್ಕಾರಿ ಸಿಬ್ಬಂದಿಗಳನ್ನು ವಜಾಗೊಳಿಸುವುದು, ಪ್ರಮುಖ ಸರ್ಕಾರಿ ಇಲಾಖೆಗಳನ್ನು ಮುಚ್ಚುವುದು, ತೃತೀಯ ಲಿಂಗಿಗಳ ವಿರುದ್ಧದ ಕಾನೂನು ಸೇರಿದಂತೆ ಟ್ರಂಪ್ ಆಡಳಿತದ ಹಲವಾರು ವಿವಾದಾತ್ಮಕ ಯೋಜನೆಗಳನ್ನು ವಿರೋಧಿಸಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿರುವುದಾಗಿ ವರದಿಯಾಗಿದೆ.







