ಬುರ್ಕಿನಾ ಫಾಸೊ | ಮಿಲಿಟರಿ ಜುಂಟಾವನ್ನು ಬೆಂಬಲಿಸಿ ಸಾವಿರಾರು ಜನರಿಂದ ಮೆರವಣಿಗೆ

Photo | SMG
ಡಾಕರ್ : ದಂಗೆ ಪ್ರಯತ್ನ ಮತ್ತು ಜುಂಟಾ ನಾಯಕ ಇಬ್ರಾಹಿಂ ಟ್ರೊರೆ ಅವರನ್ನು ಟೀಕಿಸಿ ಅಮೆರಿಕದ ಅಧಿಕಾರಿಯೋರ್ವರು ಹೇಳಿಕೆ ನೀಡಿದ ನಂತರ ಬುರ್ಕಿನಾ ಫಾಸೊದ ರಾಜಧಾನಿ ಔಗಡೌಗೌದಲ್ಲಿ ಬುಧವಾರ ಸಾವಿರಾರು ಜನರು ಮಿಲಿಟರಿ ಜುಂಟಾವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಕಳೆದ ವಾರ ಪಶ್ಚಿಮ ಆಫ್ರಿಕಾದ ದೇಶದ ಮಿಲಿಟರಿ ಸರಕಾರ ಜುಂಟಾ ನಾಯಕ ಕ್ಯಾಪ್ಟನ್ ಇಬ್ರಾಹಿಂ ಟ್ರೊರೆ ಅವರನ್ನು ಪದಚ್ಯುತಿಗೊಳಿಸಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಹೇಳಿತು. ಸಂಚುಕೋರರು ನೆರೆಯ ಐವರಿ ಕೋಸ್ಟ್ನಲ್ಲಿ ನೆಲೆಸಿದ್ದಾರೆ ಎಂದು ಸೇನೆ ಆರೋಪಿಸಿತು.
ಈ ತಿಂಗಳ ಆರಂಭದಲ್ಲಿ ಆಫ್ರಿಕಾದಲ್ಲಿನ ಯುಎಸ್ ಮಿಲಿಟರಿ ಮುಖ್ಯಸ್ಥ ಜನರಲ್ ಮೈಕೆಲ್ ಲ್ಯಾಂಗ್ಲೆ, ಯುಎಸ್ ಸೆನೆಟ್ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ ಟ್ರೇರ್ ಬುರ್ಕಿನಾ ಫಾಸೊದ ಚಿನ್ನದ ನಿಕ್ಷೇಪಗಳನ್ನು ಜುಂಟಾಗೆ ಲಾಭವಾಗುವಂತೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಬುಧವಾರ ಔಗಡೌಗೌದಲ್ಲಿನ ಪ್ಲೇಸ್ ಡೆ ಲಾ ರೆವಲ್ಯೂಷನ್ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರ ಗುಂಪು ಕ್ಯಾಪ್ಟನ್ ಟ್ರೋರ್ ಚಿರಾಯುವಾಗಲಿ ಎಂದು ಘೋಷಣೆ ಕೂಗಿದರು. ಕೆಲವರು ಜನರಲ್ ಲ್ಯಾಂಗ್ಲಿಯ ಫೋಟೋ ಇರುವ ಬ್ಯಾನರ್ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಫೋಟೋದಲ್ಲಿ ಜನರಲ್ ಲ್ಯಾಂಗ್ಲಿಯನ್ನು ʼಗುಲಾಮʼ ಎಂದು ಬರೆಯಲಾಗಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಸಂಗೀತಗಾರ ಒಸಿಬಿ ಜೋಹಾನ್, ಲ್ಯಾಂಗ್ಲಿಯವರ ಆರೋಪಗಳಿಂದ ನನಗೆ ಆಶ್ಚರ್ಯವಾಗಿಲ್ಲ. ಕಾಲಿನ್ ಪೊವೆಲ್ ಸುಳ್ಳು ಹೇಳಿದ್ದರಿಂದ ಇರಾಕ್ ಮೇಲೆ ಪ್ರಭಾವ ಬೀರಿತು. ಬರಾಕ್ ಒಬಾಮಾ ಸುಳ್ಳು ಹೇಳಿದರು, ಗಡಾಫಿ ಕೊಲ್ಲಲ್ಪಟ್ಟರು. ಆದರೆ ಈ ಬಾರಿ ಅವರ ಸುಳ್ಳುಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಅದಕ್ಕಾಗಿಯೇ ನಾವು ಅವರಿಗೆ ಹೇಳುತ್ತೇವೆ, ನಾವು ಆರ್ಥಿಕ ಗುಲಾಮಗಿರಿಯನ್ನು ವಿರೋಧಿಸುತ್ತೇವೆ ಎಂದು ಹೇಳಿದರು.







