ಲೈಂಗಿಕ ಕಳ್ಳಸಾಗಣೆ ಪ್ರಕರಣ | ಹೊಂಡುರಾಸ್ ನಲ್ಲಿ ಅಪರಾಧಿಗಳೆಂದು ಘೋಷಿತ ನಾಲ್ವರಲ್ಲಿ ಮೂವರು ಅಮೆರಿಕ ಪ್ರಜೆಗಳು

ಸಾಂದರ್ಭಿಕ ಚಿತ್ರ
ಟೆಗುಸಿಗಾಲ್ಪಾ (ಹೊಂಡುರಾಸ್), ನ.21: 2022ರಲ್ಲಿ ಯುವತಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಮೆರಿಕದ ಪ್ರಜೆಗಳು ಸೇರಿದಂತೆ ನಾಲ್ವರನ್ನು ಹೊಂಡುರಾಸ್ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದೆ. ನಾಪತ್ತೆಯಾದ ಯುವತಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಮಹಿಳೆಯರನ್ನು ಲೈಂಗಿಕ ಕಳ್ಳಸಾಗಣೆ ಜಾಲಕ್ಕೆ ನೇಮಿಸಿಕೊಂಡ ಅಪರಾಧ ಸಾಬೀತಾಗಿರುವುದರಿಂದ, ಪ್ರತಿ ಅಪರಾಧಿಗೂ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಕೋರುವುದಾಗಿ ಅಟಾರ್ನಿ ಜನರಲ್ ಕಚೇರಿಯು ಶುಕ್ರವಾರ ತಿಳಿಸಿದೆ. ಮುಂದಿನ ವಿಚಾರಣೆ ಡಿ. 9ರಂದು ನಡೆಯಲಿದೆ.
ಇದೇ ವೇಳೆ, ಅಮೆರಿಕದ ಪ್ರಜೆಗಳಾದ ಹೆರಾಲ್ಡ್ ಗ್ರೀನ್ ಮತ್ತು ವಿಲಿಯಂ ಜೇಮ್ಸ್ ಮುರ್ಡೋಕ್ ಅವರನ್ನು ಮಾನವ ಕಳ್ಳಸಾಗಣೆ ಆರೋಪದಿಂದ ಖುಲಾಸೆಗೊಳಿಸಿರುವ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿಯೂ ಸಚಿವಾಲಯ ಹೇಳಿದೆ.
ಇವರಿಬ್ಬರೊಂದಿಗೆ ಅಮೆರಿಕದ ಗ್ಯಾರಿ ಲೀ ಜಾನ್ಸ್ಟನ್ ಮತ್ತು ಹೊಂಡುರಾಸ್ ನ ಗುಸ್ತಾವೊ ಟ್ರೆಜೊ ‘ಅಪರಾಧ ಕೂಟ’ ರಚಿಸಿದ ಆರೋಪದಡಿ ದೋಷಿಗಳಾಗಿದ್ದಾರೆ.
►ಯುವತಿಯ ನಾಪತ್ತೆ ಹಿನ್ನೆಲೆ
ವಿವಿ ವಿದ್ಯಾರ್ಥಿನಿ ಆ್ಯಂಜೀ ಪೆನಾ 2022ರ ಜನವರಿ 1ರಂದು ಹೊಂಡುರಾಸ್ ನ ಉತ್ತರ ಕರಾವಳಿಯ ರೋಟಾನ್ ದ್ವೀಪದ ಬಳಿ ಜೆಟ್ ಸ್ಕೀಯಿಂಗ್ ಮಾಡುವಾಗ ನಾಪತ್ತೆಯಾಗಿದ್ದರು. ಆರಂಭದಲ್ಲಿ ಪೊಲೀಸರು ಆಕೆ ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಿದ್ದರು. ಆದರೆ, ಆಕೆಯ ಜೆಟ್ ಸ್ಕೀ ಸುಮಾರು 170 ಕಿ.ಮೀ. ದೂರದ ಬೆಲೀಜ್ ನಲ್ಲಿ ಪತ್ತೆಯಾದ ನಂತರ ಮಾನವ ಕಳ್ಳಸಾಗಣೆ ತನಿಖೆ ಆರಂಭವಾಯಿತು. ತನಿಖೆಯ ವೇಳೆ ಆಕೆ ‘ಡೆಲ್ಟಾ ಟೀಮ್ಸ್’ ಎಂಬ ಲೈಂಗಿಕ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗಿರುವುದು ತಿಳಿದುಬಂದಿತ್ತು.
ಅಪ್ರಾಪ್ತ ವಯಸ್ಕರೂ ಕಳ್ಳಸಾಗಣೆ ಜಾಲಕ್ಕೆ ಬಲಿಪಶುಗಳಾಗಿದ್ದರು ಎಂದು ಅಟಾರ್ನಿ ಜನರಲ್ ಕಚೇರಿಯು ಅಭಿಪ್ರಾಯಿಸಿತ್ತು.
ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಪತ್ತೆಹಚ್ಚಿ, ನೇಮಿಸಿಕೊಂಡು ಸಾಗಿಸುತ್ತಿದ್ದ ಆರೋಪ ಸಾಬೀತಾಗಿದೆ. ಆದರೆ, ಪೆನಾ ಅವರ ನಾಪತ್ತೆಗೂ ಗ್ರೀನ್ ಮತ್ತು ಮುರ್ಡೋಕ್ ಅವರಿಗೂ ನೇರ ಸಂಬಂಧ ಕಲ್ಪಿಸಲು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿರುವ ನ್ಯಾಯಾಲಯವು ಅವರನ್ನು ಕಳ್ಳಸಾಗಣೆ ಆರೋಪದಿಂದ ಮುಕ್ತಗೊಳಿಸಿದೆ.
ಲ್ಯಾಟಿನ್ ಅಮೆರಿಕದಲ್ಲೇ ಅತಿ ಹೆಚ್ಚು ಮಹಿಳಾ ಹತ್ಯೆ ಪ್ರಕರಣ(ಪ್ರತಿ ಒಂದು ಲಕ್ಷ ಜನರಿಗೆ 4.3 ಪ್ರಕರಣಗಳು) ಹೊಂದಿರುವ ಹೊಂಡುರಾಸ್ ನಲ್ಲಿ ಮಹಿಳೆಯರಿಗೆ ನ್ಯಾಯ ಸಿಗುವುದು ಎಷ್ಟು ಕಷ್ಟಕರವಾಗಿದೆ ಎನ್ನುವುದನ್ನು ಈ ಪ್ರಕರಣ ಎತ್ತಿ ತೋರಿಸಿದೆ.
ಶುಕ್ರವಾರದ ವಿಚಾರಣೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಪೆನಾ ಕುಟುಂಬವು ವಿಚಾರಣೆಯ ಪಾರದರ್ಶಕತೆಯನ್ನು ಪ್ರಶ್ನಿಸಿದೆ.
ಆಗಸ್ಟ್ ನಲ್ಲಿ ಈ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರ ಹತ್ಯೆಯಾಗಿತ್ತು.
ಈ ತೀರ್ಪಿನಿಂದ ಆ್ಯಂಜೀ ಎಲ್ಲಿದ್ದಾಳೆ ಅಥವಾ ಅವಳಿಗೆ ಏನಾಯಿತು ಎನ್ನುವುದು ತಿಳಿದುಬಂದಿಲ್ಲ. ತನಿಖೆ ಮುಂದುವರಿಯಬೇಕು ಎಂದು ಕುಟುಂಬದ ಪರ ವಕೀಲರು ಮತ್ತು ಪೆನಾ ಅವರ ಚಿಕ್ಕಮ್ಮ ಯೆನೆಲಿ ಡಯಾಜ್ ಒತ್ತಾಯಿಸಿದ್ದಾರೆ.






