BRICS ಶೃಂಗಸಭೆಗೂ ಮುನ್ನ ನೋಯ್ಡಾ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆದ ರಷ್ಯಾದ 3 ಸೇನಾ ವಿಮಾನಗಳು

Photo: screengrab/x.com/theupindex
ನೋಯ್ಡಾ / ಲಕ್ನೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಹಿನ್ನೆಲೆಯಲ್ಲಿ, ಬ್ರಿಕ್ಸ್ ಶೃಂಗಸಭೆ ಆರಂಭಕ್ಕೂ ಮುನ್ನ ರಷ್ಯಾದ ಮುಂಗಡ ತಂಡ ಹಾಗೂ ಸೇನಾ ಅಧಿಕಾರಿಗಳನ್ನು ಹೊತ್ತ ಮೂರು ರಷ್ಯಾದ ಸೇನಾ ವಿಮಾನಗಳು ಮಂಗಳವಾರ ಬೆಳಗ್ಗೆ ನೋಯ್ಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದವು. ಇದರೊಂದಿಗೆ ನೋಯ್ಡಾದ ಹೊಸ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನವೊಂದು ಲ್ಯಾಂಡ್ ಆಗಿರುವುದು ಇದೇ ಮೊದಲಾಗಿದೆ.
ಭಾರತಕ್ಕೆ ಬರುವ ವಿದೇಶಿ ಸೇನಾ ವಿಮಾನಗಳು ಸಾಮಾನ್ಯವಾಗಿ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದವು. ಇದೀಗ ರಷ್ಯಾದ ಸೇನಾ ವಿಮಾನಗಳು ನೋಯ್ಡಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವುದು, ಹೊಸ ವಿಮಾನ ನಿಲ್ದಾಣದ ಪಾಲಿಗೆ ಮಹತ್ವದ ಮೊದಲ ಹೆಜ್ಜೆಯಾಗಿದೆ.
ಮಂಗಳವಾರ ಮುಂಜಾನೆ ಸುಮಾರು 5:30ರ ವೇಳೆಗೆ ರಷ್ಯಾದ ಮೂರು ಸೇನಾ ವಿಮಾನಗಳು ರನ್ವೇಯಲ್ಲಿ ಬಂದಿಳಿದವು. ಇವುಗಳಲ್ಲಿ ರಷ್ಯಾದ ಸೇನಾ ಸಾರಿಗೆ ವಿಮಾನ ಐಎಲ್-76 (IL-76) ಕೂಡ ಸೇರಿತ್ತು. ರಷ್ಯಾದ ಮುಂಗಡ ತಂಡ ಹಾಗೂ ಸೇನಾ ಅಧಿಕಾರಿಗಳು ಈ ವಿಮಾನಗಳ ಮೂಲಕ ಭಾರತಕ್ಕೆ ಆಗಮಿಸಿದರು.
ಈ ಲ್ಯಾಂಡಿಂಗ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂಬರುವ ಭಾರತ ಭೇಟಿ ಹಾಗೂ ದಿಲ್ಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಸಿದ್ಧತೆಗಳ ಭಾಗವಾಗಿದೆ. ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.
ವಿಮಾನ ನಿಲ್ದಾಣದಲ್ಲೇ ನಿಂತಿರುವ ರಷ್ಯಾದ ವಿಮಾನಗಳು
ಬುಧವಾರ ಇಡೀ ದಿನ ಮೂರೂ ರಷ್ಯಾದ ಸೇನಾ ವಿಮಾನಗಳು ವಿಮಾನ ನಿಲ್ದಾಣದ ರನ್ವೇಯಲ್ಲೇ ನಿಂತಿದ್ದವು. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ರಷ್ಯಾದ ತಂಡಗಳೊಂದಿಗೆ ಸಮನ್ವಯ ಸಾಧಿಸಿ ವಿಮಾನಗಳ ಮೇಲೆ ನಿಗಾ ಇರಿಸಿದ್ದಾರೆ. ಜೊತೆಗೆ ಭದ್ರತಾ ವ್ಯವಸ್ಥೆಗಳನ್ನೂ ಪರಿಶೀಲಿಸುತ್ತಿದ್ದಾರೆ.
ಸೆಪ್ಟೆಂಬರ್ 12-13ರಂದು ಬ್ರಿಕ್ಸ್ ಶೃಂಗಸಭೆ
18ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13ರಂದು ದಿಲ್ಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದೆ. ಹಲವು ದೇಶಗಳ ರಾಷ್ಟ್ರ ಮತ್ತು ಸರ್ಕಾರದ ಮುಖ್ಯಸ್ಥರು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನೋಯ್ಡಾ ವಿಮಾನ ನಿಲ್ದಾಣದಲ್ಲಿ ರಷ್ಯಾದ ಸೇನಾ ವಿಮಾನಗಳ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ವ್ಯವಸ್ಥೆ, ಅಂತರರಾಷ್ಟ್ರೀಯ ಶಿಷ್ಟಾಚಾರ ಹಾಗೂ ವಿದೇಶಿ ಗಣ್ಯರ ಭೇಟಿಗೆ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಭಾಗವಾಗಿದೆ.






