ಬಾಂಗ್ಲಾದಾದ್ಯಂತ ಬಿಗಿ ಬಂದೋಬಸ್ತ್; ನ.17ಕ್ಕೆ ಹಸೀನಾ ವಿರುದ್ಧ ತೀರ್ಪು

Photo: indianexpress
ಢಾಕಾ,ನ.15: ಕಳೆದ ವರ್ಷ ನಡೆದ ಸರಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭ ಸಾವಿರಕ್ಕೂ ಅಧಿಕ ಮಂದಿಯ ಹತ್ಯೆಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿಶೇಷ ನ್ಯಾಯಾಧೀಕರಣವು ಸೋಮವಾರ ತೀರ್ಪು ನೀಡಲಿದ್ದು, ದೇಶಾದ್ಯಂತ ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.
ಬಾಂಗ್ಲಾದ ಆಂತರಿಕ ಸಲಹೆಗಾರ ಜಹಾಂಗೀರ್ ಅಲಂ ಚೌಧುರಿ ಅವರು ರವಿವಾರ ಹೇಳಿಕೆಯೊಂದನ್ನು ನೀಡಿ, ನ್ಯಾಯಾಧೀಕರಣ ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಅಹಿತಕರ ಘಟನೆಗಳನ್ನು ತಡೆಗಟ್ಟಲು ಕಾನೂನು ಅನುಷ್ಠಾನ ಏಜೆನ್ಸಿಗಳು ಅಗತ್ಯವಿರುವ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ ಎಂದು ಹೇಳಿದ್ದಾರೆ.
78 ವರ್ಷ ವಯಸ್ಸಿನ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣವು (ಐ.ಸಿ.ಟಿ-ಬಿ.ಡಿ.) ಸೋಮವಾರ ತೀರ್ಪು ಪ್ರಕಟಿಸಲಿದೆ.
ಶೇಖ್ ಹಸೀನಾ,ಅವರ ಸರಕಾರದ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಾಲ್ ಹಾಗೂ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಚೌಧುರಿ ಅಬ್ದುಲ್ಲಾ ಎಐ-ಮೌಮೀನ್ ವಿರುದ್ಧ ಐದು ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಗಿದೆ. ಇವರ ವಿರುದ್ಧ ಕೊಲೆ, ಕೊಲೆಯತ್ನ, ಚಿತ್ರಹಿಂಸೆ ಹಾಗೂ ಇತರ ಅಮಾನವೀಯ ಕೃತ್ಯಗಳನ್ನು ಎಸಗಿದ ಆರೋಪಗಳನ್ನು ಹೊರಿಸಲಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಕಮಾಲ್ ಅನುಪಸ್ಥಿತಿಯಲ್ಲಿ ಅವರ ವಿಚಾರಣೆ ನಡೆಸಲಾಗಿದೆ. ಇವರಿಬ್ಬರನ್ನೂ ತಲೆಮರೆಸಿಕೊಂಡ ಆರೋಪಿಗಳೆಂದು ನ್ಯಾಯಾಲಯ ಈಗಾಗಲೇ ಘೋಷಿಸಿದೆ. ಮಮೂನ್ ಅವರು ಖುದ್ದಾಗಿ ವಿಚಾರಣೆಯನ್ನು ಎದುರಿಸುತ್ತಿದ್ದು, ಅವರೀಗ ಮಾಫೀ ಸಾಕ್ಷಿದಾರ ಅಥವಾ ಆಡಳಿತದ ಪರ ಸಾಕ್ಷಿಯೆಂದು ಪರಿಗಣಿಸಲ್ಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಹಕ್ಕುಗಳ ಸಂಸ್ಥೆಯ ವರದಿ ಪ್ರಕಾರ ಕಳೆದ ವರ್ಷದ ಜುಲೈ 15ರಿಂದ ಆಗಸ್ಟ್ 15ರವರೆಗೆ ನಡೆದ ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಲು ಹಸೀನಾ ಸರಕಾರವ ನೀಡಿದ ಆದೇಶದಂತೆ ಭದ್ರತಾಪಡೆಗಳು ಹಾಗೂ ಪೊಲೀಸರು 1400ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿರುವುದಾಗಿ ಆರೋಪಿಸಿದೆ.
ಕಳೆದ ವರ್ಷ ನಡೆದ ಪ್ರತಿಭಟನೆಗಳ ಸಂದರ್ಭ ಮಾನವತೆಯ ವಿರುದ್ಧ ಎಸಗಲಾದ ಅಪರಾಧಗಳ ಹಿಂದಿನ ಸೂತ್ರಧಾರಿ ಹಸೀನಾ ಅವರೆಂದು ಸರಕಾರದ ಮುಖ್ಯ ಅಭಿಯೋಜಕ ಮೊಹಮ್ಮದ್ ತಾದಜುಲ್ ಇಲಾಂ ಆರೋಪಿಸಿದ್ದು ಆಕೆಗೆ ಮರಣದಂಡನೆ ನೀಡಬೇಕೆಂದು ಆಗ್ರಹಿಸಿದ್ದರು.
ಆದರೆ ಹಸೀನಾ ಬೆಂಬಲಿಗರು ಈ ಆರೋಪಗಳನ್ನು ತಳ್ಳಿಹಾಕಿದ್ದು,ಆಕೆಯ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವೆಂದು ಆರೋಪಿಸಿದ್ದಾರೆ. ಪದಚ್ಯುತಿಯ ಬಳಿಕ ಶೇಖ್ ಹಸೀನಾ ಅವರು ಪ್ರಸಕ್ತ ಭಾರತದಲ್ಲಿ ಆಶ್ರಯಪಡೆದುಕೊಂಡಿದ್ದಾರೆ.







