ಕಿರುಕುಳ ನೀಡಲು , ವಿದೇಶಿ ನಿಧಿ ಪ್ರಕರಣ ದಾಖಲು
ಹೈಕೋರ್ಟ್ಗೆ ತಿಳಿಸಿದ ‘ನ್ಯೂಸ್ ಕ್ಲಿಕ್’

Photo: newsclick.com
ಹೊಸದಿಲ್ಲಿ: ಉಚ್ಚ ನ್ಯಾಯಾಲಯದ ಮುಂದೆ ವಿದೇಶಿ ಹೂಡಿಕೆ ಆರೋಪವನ್ನು ನಿರಾಕರಿಸಿರುವ ‘ನ್ಯೂಸ್ ಕ್ಲಿಕ್’, ಅನ್ವಯವಾಗುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಸುದ್ದಿ ಸಂಸ್ಥೆ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಆರ್ಬಿಐ ಕೂಡ ಹೇಳಿದೆ ಎಂದು ಮಂಗಳವಾರ ಪ್ರತಿಪಾದಿಸಿದೆ.
ಆರಂಭದಲ್ಲಿ ಆರ್ಥಿಕ ಅಪರಾಧಗಳ ದಳ (ಇಒಡಬ್ಲ್ಯು) ದಾಖಲಿಸಿದ ಎಫ್ಐಆರ್ ಹಾಗೂ ತರುವಾಯ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿರುವ ‘ನ್ಯೂಸ್ ಕ್ಲಿಕ್’, ತಾನು ಯಾವುದೇ ಮಾರ್ಗಸೂಚಿ ಅಥವಾ ವಿದೇಶಿ ನೇರ ಹೂಡಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದೆ.
ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ನ್ಯೂಸ್ ಕ್ಲಿಕ್ ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಅ. 3ರಂದು ಬಂಧಿಸಲಾಗಿತ್ತು. ಅನಂತರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
‘ಇದು ಸಂಪೂರ್ಣ ಅಪ್ರಮಾಣಿಕ ಹಾಗೂ ಮಾಧ್ಯಮಕ್ಕೆ ಕಿರುಕುಳ ನೀಡುವ ದುರುದ್ದೇಶದಿಂದ ಕೂಡಿದ ದೂರಾಗಿದೆ. ಅವರು ಈಗ ಜೈಲಿನಲ್ಲಿದ್ದಾರೆ’’ ಎಂದು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರ ಮುಂದೆ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು. ವಿದೇಶಿ ನೇರ ಹೂಡಿಕೆಯ ಮಾರ್ಗಸೂಚಿಯ ಉಲ್ಲಂಘನೆಯಾಗಲಿ, ತೆರಿಗೆ ಕಾನೂನಿನ ಉಲ್ಲಂಘನೆಯಾಗಲಿ ನಡೆದಿಲ್ಲ ಎಂದು ಅವರು ಹೇಳಿದರು.
‘ಹೊಸ ಎಫ್ಐಆರ್ನಲ್ಲಿ ಹಣ ಚೀನಾದಿಂದ ಬಂದಿದೆ ಎಂದು ಹೇಳಲಾಗಿದೆ. ನೀವು ಅವರನ್ನು ಹೀಗೆ ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಅವರು 72 ವರ್ಷದ ವ್ಯಕ್ತಿ’ ಎಂದು ಕಪಿಲ್ ಸಿಬಲ್ ಹೇಳಿದರು.







