ರಶ್ಯ ಮೇಲೆ ಆರ್ಥಿಕ ಒತ್ತಡವೇರುವ ಉದ್ದೇಶದಿಂದಲೇ ಭಾರತದ ಮೇಲೆ ಹೆಚ್ಚುವರಿ ಸುಂಕ : ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್

ಜೆ.ಡಿ. ವ್ಯಾನ್ಸ್ (Photo: PTI)
ಹೊಸದಿಲ್ಲಿ : ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ರವಿವಾರ ಭಾರತ ಮೇಲೆ ವಿಧಿಸಿದ ಹೆಚ್ಚುವರಿ ನಿರ್ಬಂಧಗಳು ಮತ್ತು ಸುಂಕಗಳನ್ನು ಸಮರ್ಥಿಸಿದರು. ರಶ್ಯ–ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಶ್ಯಾದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ವಾಷಿಂಗ್ಟನ್ನ ತಂತ್ರದ ಭಾಗವೆಂದು ಅವರು ಹೇಳಿದರು.
ಎನ್ಬಿಸಿಯ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ವ್ಯಾನ್ಸ್, ಟ್ರಂಪ್ ಆಡಳಿತ ಭಾರತಕ್ಕೆ ಸುಂಕ ವಿಧಿಸುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ರಷ್ಯಾ ತನ್ನ ತೈಲ ಆರ್ಥಿಕತೆಯಿಂದ ಲಾಭ ಪಡೆಯುವುದನ್ನು ಕಷ್ಟಕರಗೊಳಿಸಿದೆ ಎಂದು ಜೆ.ಡಿ. ವ್ಯಾನ್ಸ್ ಹೇಳಿದರು.
ಅಧ್ಯಕ್ಷರು ಕಠಿಣ ಆರ್ಥಿಕ ಒತ್ತಡ ಹೇರಿದ್ದಾರೆ. ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸಿರುವುದು ರಷ್ಯಾ ತನ್ನ ತೈಲ ವ್ಯಾಪಾರದಿಂದ ಹೆಚ್ಚು ಹಣ ಗಳಿಸದಂತೆ ಮಾಡುವ ಪ್ರಯತ್ನವಾಗಿದೆ. ರಷ್ಯಾ ಹತ್ಯೆಗಳನ್ನು ನಿಲ್ಲಿಸಿದರೆ ಜಾಗತಿಕ ವ್ಯವಹಾರ ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಅದು ಪ್ರತ್ಯೇಕವಾಗಿಯೇ ಮುಂದುವರಿಯಲಿದೆ ಎಂದು ಹೇಳಿದರು.
ಅಮೆರಿಕದ ಕ್ರಮದಿಂದ ರಶ್ಯನ್ನರು ತಮ್ಮ ತೈಲ ಆರ್ಥಿಕತೆಯಿಂದ ಶ್ರೀಮಂತರಾಗಲು ಕಷ್ಟವಾಗುತ್ತದೆ ಎಂದು ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
ರಶ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಟ್ರಂಪ್ ಇತ್ತೀಚೆಗೆ 50% ಸುಂಕವನ್ನು ಘೋಷಿಸಿದ್ದರು. ಅಮೆರಿಕ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಟ್ರಂಪ್ ಆಡಳಿತ ರಶ್ಯಾದ ಮೇಲೆ ಈಗಾಗಲೇ ಹೆಚ್ಚಿನ ಆರ್ಥಿಕ ಒತ್ತಡ ಹೇರಿದೆ ಎಂದು ಹೇಳಿದರು.
ರಶ್ಯಾದಿಂದ ಅತಿ ಹೆಚ್ಚು ತೈಲವನ್ನು ಖರೀದಿಸುತ್ತಿರುವ ಚೀನಾದ ಮೇಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಜೆ.ಡಿ. ವ್ಯಾನ್ಸ್, ಈಗ ಚೀನಾದ ಮೇಲೆ 54 ಶೇಕಡಾ ಸುಂಕವಿದೆ. ಅಂದರೆ ಈಗಾಗಲೇ ದೊಡ್ಡ ಮಟ್ಟದ ನಿರ್ಬಂಧಗಳನ್ನು ಹೇರಿದ್ದೇವೆ. ಜೊತೆಗೆ ಯುದ್ಧವನ್ನು ಕೊನೆಗಾಣಿಸುವಲ್ಲಿ ಚೀನಾ ಉತ್ತಮ ಪಾಲುದಾರರಾಗಬೇಕೆಂದು ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿದ್ದೇವೆ ಎಂದರು.







