ಟೊರೊಂಟೊ: ಡೆಲ್ಟಾ ಜೆಟ್ ವಿಮಾನ ತುರ್ತು ಭೂಸ್ಪರ್ಶ; 19 ಮಂದಿಗೆ ಗಾಯ

PC:x.com/TheConsultant18
ಟೊರೊಂಟೊ: ಒಟ್ಟು 80 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವೊಂದು ದಟ್ಟ ಮಂಜು ಮುಸುಕಿದ್ದ ಇಲ್ಲಿನ ಪಿಯರ್ ಸನ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಜೆ ಅಪಘಾತಕ್ಕೀಡಾಗಿ, ಪಲ್ಟಿಯಾಗಿ ಬಿದ್ದು ಅಂತಿಮವಾಗಿ ನಾಟಕೀಯ ತುರ್ತು ಭೂಸ್ಪರ್ಶ ಮಾಡಿದ ಘಟನೆ ವರದಿಯಾಗಿದೆ.
ಅಪಘಾತದಲ್ಲಿ 19 ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಮಗು ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಪವಾಡ ಸದೃಶವಾಗಿ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೆಂಜ್ ಏರ್ ಆ್ಯಂಬುಲೆನ್ಸ್ ಮೂಲಗಳ ಪ್ರಕಾರ, ತೀವ್ರವಾಗಿ ಗಾಯಗೊಂಡಮೂರು ಮಂದಿಯನ್ನು ಟೊರೊಂಟೊ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಂದು ಮಗುವನ್ನು ಅಸ್ವಸ್ಥ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, 60 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮಹಿಳೆಯನ್ನು ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವಿಮಾನ ಮಗುಚಿ ಬಿದ್ದಾಗ ಸೀಟಿನಲ್ಲಿದ್ದ ಮಹಿಳೆಯೊಬ್ಬರು ತಲೆ ಕೆಳಗಾಗಿ ಬಿದ್ದ ದೃಶ್ಯಾವಳಿ, ಘಟನೆಯ ಸಂಬಂಧಿತ ವಿಡಿಯೊದಲ್ಲಿ ದಾಖಲಾಗಿದೆ.
ಈ ವಿಡಿಯೊವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಹಿಳೆ, "ನನ್ನ ವಿಮಾನ ಅಪಘಾತಕ್ಕೀಡಾಗಿದ್ದು, ನಾನು ತಲೆ ಕೆಳಗಾಗಿ ಬಿದ್ದಿದ್ದೇನೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಭಯಭೀತರಾದ ಪ್ರಯಾಣಿಕರು ವಿಮಾನದ ನಿರ್ಗಮನ ದ್ವಾರದತ್ತ ಧಾವಿಸಿ ಸುರಕ್ಷಿತ ಮಾರ್ಗದಲ್ಲಿ ಹೊರಬರುವ ಪ್ರಯತ್ನ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. "ನಾನು ಅಪಘಾತಕ್ಕೀಡಾದ ವಿಮಾನದಲ್ಲಿದ್ದೇನೆ.. ದೇವರೇ.." ಎಂದು ಹತಾಶ ಪ್ರಯಾಣಿಕರೊಬ್ಬರು ಉದ್ಗರಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಅಲ್ಪಕಾಲ ರನ್ವೇ ಮುಚ್ಚಲಾಗಿತ್ತು. ಬಳಿಕ ಮರು ಕಾರ್ಯಾರಂಭ ಮಾಡಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.
ಮಿನಿಯಾ ಪೊಲಿಸ್ ನಿಂದ ಈ ವಿಮಾನ ಆಗಮಿಸಿದ್ದು, ಸುಮಾರು 80 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಬಹುತೇಕ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೀಲ್ ಪ್ರದೇಶದ ಪ್ಯಾರಾಮೆಡಿಕಲ್ ಸುಪರಿಂಟೆಂಡೆಂಟ್ ವಿವರಿಸಿದ್ದಾರೆ.







