ಅಮೆರಿಕದ ಜೊತೆ ಅವಸರದ ವ್ಯಾಪಾರ ಒಪ್ಪಂದ ಸಾಧ್ಯವಿಲ್ಲ : ಕೈಗಾರಿಕಾ ಸಚಿವ ಪಿಯೂಷ್ ಗೋಯಲ್

ಪೀಯುಶ್ ಗೋಯಲ್ | Photo Credit : PTI
ಬರ್ಲಿನ್, ಅ. 24: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಹಾಕುವಂತೆ ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ಭಾರತವು ಮಾತುಕತೆಗಳಿಗೆ ಮುಕ್ತವಾಗಿದೆ, ಆದರೆ ಗಡುವುಗಳನ್ನು ಸ್ವೀಕರಿಸುವುದಿಲ್ಲ ಎಂಬುದಾಗಿಯೂ ಅವರು ಹೇಳಿದರು. ‘‘ನಾವು ಖಂಡಿತವಾಗಿಯೂ ಅಮೆರಿಕದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದ್ದೇವೆ, ಆದರೆ ನಾವು ಅವಸರದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ನಾವು ಗಡುವುಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಅಥವಾ ನಮ್ಮ ತಲೆಗೆ ಬಂದೂಕು ಇಟ್ಟು ಒಪ್ಪಂದ ಮಾಡಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಬರ್ಲಿನ್ ಜಾಗತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು. ಅವರು ಈಗ ಜರ್ಮನಿ ಪ್ರವಾಸದಲ್ಲಿದ್ದಾರೆ.
ಇಂದಿನ ದಿನಗಳಲ್ಲಿ ವ್ಯಾಪಾರ ಮಾತುಕತೆಗಳು ಗಡುವುಗಳು ಮತ್ತು ಸುಂಕಗಳ ಸುತ್ತ ನಡೆಯುತ್ತವೆಯೇ ಎಂಬುದಾಗಿ ಕಾರ್ಯಕ್ರಮ ನಿರೂಪಕರು ಕೇಳಿದಾಗ, ಭಾರತದ ನಿಲುವು ದೀರ್ಘಾಕಾಲೀನ ಚಿಂತನೆಗಳನ್ನು ಆಧರಿಸುತ್ತದೆಯೇ ಹೊರತು, ಒಂದು ಕ್ಷಣದ ಒತ್ತಡದಿಂದಲ್ಲ ಎಂದು ಹೇಳಿದರು.
‘‘ಭಾರತ ದೀರ್ಘಾವಧಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಅದು ಯಾವತ್ತೂ ಅವಸರದಲ್ಲಿ ಅಥವಾ ತಕ್ಷಣದ ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಮ್ಮ ಮೇಲೆ ಸುಂಕ ವಿಧಿಸಲಾಗಿದೆ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ. ಅದರಿಂದ ಹೇಗೆ ಹೊರಬೇಕು ಎಂಬುದಾಗಿ ನಾವು ಯೋಚಿಸುತ್ತಿದ್ದೇವೆ. ನಾವು ಹೊಸ ಮಾರುಕಟ್ಟೆಗಳತ್ತ ಗಮನ ಹರಿಸುತ್ತಿದ್ದೇವೆ. ಭಾರತೀಯ ಆರ್ಥಿಕತೆಯ ಒಳಗೆಯೇ ಇರುವ ಪ್ರಬಲ ಬೇಡಿಕೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ನಮ್ಮಲ್ಲಿ ಬಲಿಷ್ಠ ವ್ಯವಸ್ಥೆಯಿದೆ’’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಹೇಳಿದರು.
ಅಮೆರಿಕದ ಅತ್ಯಧಿಕ ಸುಂಕಗಳನ್ನು ಕಡಿಮೆ ಮಾಡುವ ಉದ್ದೇಶದ, ತುಂಬಾ ಸಮಯದಿಂದ ನನೆಗುದಿಗೆ ಬಿದ್ದಿರುವ ವ್ಯಾಪಾರ ಒಪ್ಪಂದವೊಂದರ ಬಗ್ಗೆ ಭಾರತ ಮತ್ತು ಅಮೆರಿಕ ಮಾತುಕತೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 50 ಶೇಕಡ ಸುಂಕ ವಿಧಿಸಿದೆ. ಈ ಪೈಕಿ 25 ಶೇಕಡ, ಭಾರತವು ರಶ್ಯದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ದಂಡವಾಗಿದೆ.







